

ಚಿಕ್ಕೋಡಿ: ಪ್ರತಿ ಹನಿ ನೀರು ದುರುಪಯೋಗ ಆಗಬಾರದು ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು-ನನಸು ಮಾಡಲು ಜಿಲ್ಲೆಯಲ್ಲಿ 100 ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸಬೇಕೆಂಬ ಸಂಕಲ್ಪ ಮಾಡಿದ್ದೆ. ಅದರಲ್ಲಿ 30 ಬ್ರೀಡ್ಜ್ ಕಂ ಬಾಂದಾರಗಳಿಗೆ ಚಾಲನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ನನದಿ ಗ್ರಾಮದಲ್ಲಿ ಸೋಮವಾರ 1 ಕೋಟಿ ರೂ. ವೆಚ್ಚದ ಬ್ರೀಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆರೂರ, ನಾಗರಾಳ, ಬೆಳಕೂಡ, ಕರೋಶಿ ಸೇರಿದಂತೆ ವಿವಿಧ ಗ್ರಾಮಗಳ 8 ಬ್ರೀಡ್ಜ್ ಕಂ ಬಾಂದಾರ ನಿರ್ಮಾಣ ಹಾಗೂ ಚಿಕ್ಕೋಡಿ ತಾಲೂಕಿನ ಹಿರೇಕೋಡಿ, ನನದಿ, ನೇಜ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 8.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.
ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಯಿಂದ ರೈತರ ಕೃಷಿ ಚಟುವಟಿಕೆ ಜತೆಗೆ ಕಬ್ಬು ಸಾಗಿಸಲು ಅನುಕೂಲವಾಗಲಿದೆ. ಬ್ರೀಡ್ಜ್ ಕಂ ಬಾಂದಾರನಿಂದ ನೀರನ್ನು ತಡೆಹಿಡಿದು ಹಿಂಗಿಸುವುದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಅಂತರ್ಜಲ ಹೆಚ್ಚಾಗಿ ಬಾವಿ ಹಾಗೂ ಕೊಳವೆ ಬಾವಿಗಳಿಗೆ ನೀರು ಹೆಚ್ಚಾಗಿ ಕೃಷಿಗೆ ನೆರವಾಗಲಿದೆ. ರೈತರ ಬದುಕು ಹಸನಾಗಿಸುವ ಕೆಲಸವನ್ನು ಎರಡು ಅವಧಿಯಲ್ಲಿ ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ಇದೆ ಎಂದರು.
ವಿ.ಎನ್.ನಿಂಬಾಳ್ಕರ ದೇಸಾಯಿ, ಸದಾಶಿವ ಕೊಂಕಣೆ, ಮಧುಕರ ಕೊಂಕಣೆ, ಚಂದ್ರಕಾಂತ ಕೊಂಕಣೆ, ಎ.ಎ. ಸೂರ್ಯವಂಶಿ, ರವಿ ಭಿವಸೆ, ಸತೀಶ ಶಾಸ್ತ್ರಿ, ಸುರೇಶ ಖೋತ, ರಾಜು ಮಸ್ತೆ, ಉಮೇಶ ಭೊಸಲೆ, ಅಣ್ಣಪ್ಪ ಸುಳೆ, ರಣಜಿತ ಪವಾರ ಇತರರಿದ್ದರು.