ಜಿಲ್ಲೆಯ ಬಿಜೆಪಿ ಮುಖಂಡರ ಜತೆ ಬಸವರಾಜ ಬೊಮ್ಮಾಯಿ ಸಭೆ: ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸಿಎಂ ಸಲಹೆ

26Tmk_CM_Sogadu_01
Published on

ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮುಖಂಡರು ಹಾಗೂ ಕೋರ್ ಕಮಿಟಿ ಸದಸ್ಯರ ಜತೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.

ನಗರದ ಖಾಸಗಿ ಸಹಕಾರಿಯ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ 8.45ರಿಂದ ಗಂಟೆಗೂ ಹೆಚ್ಚು ಕಾಲ ಪಕ್ಷದ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಹಾಗೂ ಪ್ರಮುಖ ಮುಖಂಡರ ಸಭೆಯಲ್ಲಿ ಪರಿಷತ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಬಗ್ಗೆ ಗಂಭೀರ ಚರ್ಚೆ ನಡೆಸಿದರಲ್ಲದೆ, ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುವಂತೆ ಪಕ್ಷದ ಮುಖಂಡರನ್ನು ಹುರಿದುಂಬಿಸಿದ್ದಾರೆ.

ಪಕ್ಷದೊಳಗಿನ ಸಣ್ಣಪುಟ್ಟ ಅಸಮಾಧಾನಗಳ ಮಾಹಿತಿ ಪಡೆದಿದ್ದ ಬಸವರಾಜ ಬೊಮ್ಮಾಯಿ ಅವರು ಖುದ್ದು ಮುಖಂಡರ ಸಭೆ ನಡೆಸಿ ಬಗಹರಿಸುವ ಪ್ರಯತ್ನ ನಡೆಸಿದರಲ್ಲದೆ, ಎಲ್ಲರೂ ಒಗ್ಗೂಡಿ ಹೋರಾಟ ನಡೆಸಿದರೆ ಗೆಲುವು ನಮ್ಮದಾಗಲಿದೆ. ಇಬ್ಬರು ಸಚಿವರು ಸೇರಿ ಐವರು ಶಾಸಕರು, ಇಬ್ಬರು ಎಂಎಲ್ಸಿ, ಕೇಂದ್ರ ಸಚಿವರು ಸೇರಿ ಇಬ್ಬರು ಸಂಸದರು ಜತೆಗೆ ಸರ್ಕಾರ ಆಡಳಿತದಲ್ಲಿದೆ. ಸ್ಥಳೀಯ ಸಂಸ್ಥೆ ಪರಿಷತ್ ಕ್ಷೇತ್ರದಲ್ಲಿ ಕಮಲ ಅರಳಿಸಲು ಉತ್ತಮ ಅವಕಾಶ ಇದೆ ಎಂದಿದ್ದಾರೆ.

ಗೆಲುವಿಗೆ ಶ್ರಮಿಸಿ: ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು, ಗೆಲುವಿಗೆ ಶ್ರಮಿಸಬೇಕು ಎಂದು ಪಕ್ಷದ ಮುಖಂಡರಿಗೆ ಬೊಮ್ಮಾಯಿ ಸೂಚಿಸಿದರು. ನಗರದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಷತ್‌ನಲ್ಲಿ ಬಹುಮತಕ್ಕೆ ಈ ಚುನಾವಣೆ ನಮಗೆ ಬಹಳ ಮುಖ್ಯ ಎಂದರು. ಕಾರ್ಯಕರ್ತರ ಸಭೆಯ ನಂತರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲ ಮುಖಂಡರಿಗೂ ಜವಾಬ್ದಾರಿಗಳನ್ನು ಸಿಎಂ ನೀಡಿದರು ಎನ್ನಲಾಗಿದೆ. ಬೇರೆ ಪಕ್ಷದ ಜತೆ ಹೊಂದಾಣಿಕೆಯ ಬಗ್ಗೆ ಗುಸುಗುಸು ಕೇಳಿಬರುತ್ತಿದ್ದು, ಇಂತಹ ಅನುಮಾನಗಳಿಗೆ ಅವಕಾಶವಾಗದಂತೆ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು ಎನ್ನಲಾಗಿದೆ.

ಸಚಿವ ಮಾಧುಸ್ವಾಮಿ, ಅಭ್ಯರ್ಥಿ ಗೈರು: ಸಿಎಂ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಿಂದ ತುಮಕೂರಿಗೆ ಆಗಮಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಚಹಾ ಸೇವಿಸಿ, ಸಭೆಗೆ ಆಗಮಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಮುಖಂಡರ ಜತೆ ಪ್ರಮುಖ ಸಭೆ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗೈರು ಎದ್ದುಕಾಣಿಸಿತು. ಅಭ್ಯರ್ಥಿ ಎನ್.ಲೋಕೇಶ್ ಕೂಡ ಪ್ರಚಾರದಲ್ಲಿದ್ದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿರಲ್ಲಿ. ಎಸಿಬಿ ದಾಳಿ ನಡೆದ ನಂತರ ವೃತ್ತಿಪರವಾಗಿ ವಿಚಾರಣೆ ನಡೆಸಿ, ಅಲ್ಪೃಕಾಲದಲ್ಲಿ ಚಾರ್ ಶೀಟ್ ಸಲ್ಲಿಸಲು ಸೂಚನೆ ನೀಡಿದ್ದೇನೆ, ಎಸಿಬಿಗೆ ಸ್ವತಂರ್ತ್ಯ ನೀಡಲಾಗಿದೆ, ಮುಂದಿನ ದಿನದಲ್ಲಿ ಭ್ರಷ್ಟ ಅಧಿಕಾರಿಗಳನ್ನು ಬಲಿಹಾಕಲಾಗುವುದು ಎಂದರು.

ಜಿಲ್ಲೆಯಲ್ಲಿ ಎಲ್ಲಾ ಮುಖಂಡರ ಜತೆ ಸಭೆ ನಡೆಸಿದ್ದು ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗಿದೆ, ಇಪ್ಪತ್ತು ಸ್ಥಾನದಲ್ಲಿ ಸ್ಫರ್ಧೆ ಮಾಡಿದ್ದು ಕನಿಷ್ಟ ಹದಿನದು ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಬಸವರಾಜ ಬೊಮ್ಮಾಯಿ ಸಿಎಂ

ಸಚಿವರಾದ ಬಿ.ಸಿ.ನಾಗೇಶ್, ಬೈರತಿ ಬಸವರಾಜು, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶಗೌಡ, ಎಂಎಲ್ಸಿಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಮಾಜಿ ಶಾಸಕರಾದ ಬಿ.ಸುರೇಶಗೌಡ, ಕೆ.ಎಸ್.ಕಿರಣ್‌ಕುಮಾರ್, ಮುಖಂಡರಾದ ಡಿ.ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ಹೆಬ್ಬಾಕರವಿ, ಎಸ್.ಡಿ.ದಿಲೀಪ್ ಕುಮಾರ್, ವೈ.ಎಚ್.ಹುಚ್ಚಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net