ಜಿಲ್ಲಾಧಿಕಾರಿಗಳಿಂದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ / ಯೋಜನೆಗಳ ಅನುಷ್ಟಾನದಲ್ಲಿ ವಿಳಂಬ ನೀತಿ ಸಹಿಸಲಾಗದು/ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನೌಕರರು ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಬೇಕು. ಸಾರ್ವಜನಿಕರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು. ಸರ್ಕಾರದ ಎಲ್ಲ ಇಲಾಖೆಗಳ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಕಂದಾಯ ಇಲಾಖೆಯ ಯೋಜನೆಗಳು ಜನಸಾಮಾನ್ಯರಿಗೆ ಸಮಾಜದಲ್ಲಿ ಸಮಬಾಳು ಕಲ್ಪಿಸುವಲ್ಲಿ ಪೂರಕವಾಗಿವೆ. ಇಂತಹ ಕಂದಾಯ ಇಲಾಖೆಯ ಯೋಜನೆಗಳ ಅನುಷ್ಟಾನದಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಹಿಸಲಾಗದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ಅವರು ಸೂಚಿಸಿದರು.

ಜಿಲ್ಲಾಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಮೇಲಿರುವ ವಿಶ್ವಾಸವು ನಿರಂತರವಾಗಿ ಉಳಿಸಿಕೊಳ್ಳುವ ಕೆಲಸವನ್ನು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ನಿರ್ವಹಿಸಬೇಕು. ಇಲಾಖೆಯ ಕಾರ್ಯವ್ಯಾಪ್ತಿ ಅಪರಿಮಿತವಾಗಿದ್ದು ಅಧಿಕಾರಿ, ಸಿಬ್ಬಂದಿಗಳು ಕಾಲ ಕಾಲಕ್ಕೆ ಸರ್ಕಾರ ನೀಡುವ ಮಾರ್ಗಸೂಚಿಗಳಂತೆ ಕರ್ತವ್ಯ ಪಾಲನೆ ಮಾಡಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲುಕು ಹಂತದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಋತುಮಾನಕ್ಕೆ ತಕ್ಕಂತೆ ಬರ ನಿರ್ವಹಣೆ, ಅತಿವೃಷ್ಟಿ ನಿರ್ವಹಣೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಸೌಲಭ್ಯ ತಲುಪಿಸುವ ಹೊಣೆಗಾರಿಕೆ ನಮ್ಮದಾಗಿದೆ. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಇಲಾಖೆ ಎಲ್ಲ ಅಧಿಕಾರಿಗಳು ಕರ್ತವ್ಯನಿಷ್ಟೆಯಿಂದ ಕಾರ್ಯನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕೆಂದು ಸೂಚಿಸಿದರು.

ರೈತರೆಲ್ಲರು ತಮ್ಮ ಜಮೀನಿನ ನಿಖರವಾದ ಮಾಹಿತಿಯನ್ನು ತಂತ್ರಾAಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬೆಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಫೂಟ್ ತಂತ್ರಾAಶದಲ್ಲಿ ಈಗಾಗಲೇ ನೋಂದಣಿ ಮಾಡಲಾಗಿದ್ದು. ಬಾಕಿ ಉಳಿದ ರೈತರು ನೋಂದಣಿ ಕಾರ್ಯವನ್ನು ಈ ತಿಂಗಳ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದರು.

ಬಗರಹುಕುA ಅಡಿ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಈ ಹಿಂದೆ ನೀಡಿದ ಸಾಗುವಳಿ ಚೀಟಿ ನೀಡಿದ ನೈಜತೆಯ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕಟಣಗಳು ನ್ಯಾಯಾಲಯದಲ್ಲಿವೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಡಿಜಿಟಲಿಕರಣ ಮಾಡಲಾಗುತ್ತಿದೆ.

ಸರ್ಕಾರಿ ಭೂಮಿ ರಕ್ಷಣೆಗೆ ಲ್ಯಾನ್ಡ್ ಬೀಟ್ ಪದ್ಧತಿ:

ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಆಪ್ ಸಿದ್ಧಪಡಿಸಲಾಗಿದೆ. ಸರ್ಕಾರಿ ಜಮೀನುಗಳನ್ನು ಆಪ್ ಮೂಲಕ ಡಾಟಾಬೇಸನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗಗಳ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬದನ್ನು ಪರಿಶೀಲನೆ ನಡೆಸಿ ಆಪ್ ಮೂಲಕ ಆ ಸ್ಥಳದಿಂದಲೇ ಧೃಡೀಕರಿಸಿ ವರದಿಯನ್ನು ಆಪ್‌ಲೋಡ ಮಾಡಬೆಕು.

ಒಂದು ವೇಳೆ ಸರ್ಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆಪ್ ಬಳಸಿ ಆನಲೈನ್ ಮೂಲಕವೇ ತಹಶೀಲ್ದಾರರಿಗೆ ವರದಿ ನೀಡಬೇಕು. ಈ ಪ್ರಕ್ರಿಯೆಯಿಂದ ಸರ್ಕಾರಿ ಭೂ-ಕಬಳಿಕೆ ನಿಯಂತ್ರಣಗೊಳ್ಳಲಿದೆ ಎಂದರು.

ಇ-ಆಫೀಸ್ :

ಕಂದಾಯ ಇಲಾಖೆ ಕೆಲಸ ಕಾರ್ಯಗಳೆಲ್ಲವೂ ಚುರುಕುಗೊಳಿಸುವ ನಿಟ್ಟಿನಲ್ಲಿ ನಿಧಾನಗತಿ ತಪ್ಪಿಸಲು ಇ-ಆಫೀಸ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಇ-ಆಫೀಸ ಮೂಲಕವೇ ಕಡತಗಳ ಚಲನೆಯಾಗಬೇಕು. ಇದರಿಂದ ವಿಳಂಭಕ್ಕೆ ವಿದಾಯ ದೊರೆಯುತ್ತದೆ. ನಮ್ಮ ಸರ್ಕಾರದ ಜನಪರ ಹಾಗೂ ಪಾರದರ್ಶಕ ಆಡಳಿತದ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.

ದಾಖಲೆಗಳ ಡಿಜಿಟಲಿಕರಣ:

ರೆಕಾರ್ಡ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಶ್ವತವಾಗಿ ದಾಖಲೆಗಳನ್ನು ಉಳಿಸಲು ಡಿಜಿಟಲಿಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ದಾಖಲೆಗಳ ಸೂಕ್ತ ರಕ್ಷಣೆಗೆ ಉತ್ತಮ ತಂತ್ರಾAಶವನ್ನು ಅಭಿವೃದ್ಧಿ ಪಡಿಸಿ ರಕ್ಷಣೆ ಮಾಡುತ್ತೇವೆ. ಜನಸಾಮಾನ್ಯರಿಗೆ ಸಲೀಸಾಗಿ ಅವರಿಗೆ ಸಂಬAಧಿಸಿದ ದಾಖಲೆಗಳು ಸಿಗುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.

ಪರಿಹಾರ ಪ್ರಗತಿ, ತಾಲೂಕಾ ಕಚೇರಿಗಳ ಕಟ್ಟಡ ಪ್ರಸ್ತಾವನೆ, ಆಧಾರ್ ಸೀಡಿಂಗ್, ದಾಖಲಾತಿಗಳ ನಿರ್ವಹಣೆ, ಭೂಮಿ, ತಹಶೀಲ್ದಾರ ನ್ಯಾಯಾಲಯ ಪ್ರಕರಣಗಳು, ಆರ್.ಟಿ.ಸಿ. ಮಿಸ್ ಮ್ಯಾಚ್ ಪ್ರಕರಣಗಳು, ಮೋಜಣಿ , ಕೃಷಿ ಭೂಮಿ ಪರಿವರ್ತನೆ, ಐ.ಪಿ.ಜಿ.ಆರ್.ಎಸ್, ಮುಖ್ಯಮಂತ್ರಿಗಳ ಜನತಾ ದರ್ಶನ, ಸಕಾಲ, ಇ- ಆಫೀಸ್ ಸೇರಿದಂತೆ ವಿವಿಧ ಮಾಸಾಶನಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಜಿಲ್ಲಾಧಿಕಾರಿಗಳು ಎಲ್ಲ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು ಹಾಗೂ ತಹಶೀಲ್ದಾರರು ಕಾಲಕಾಲಕ್ಕೆ ತಮ್ಮ ಹಂತದಲ್ಲಿ ಸಭೆಯ ಏರ್ಪಡಿಸಿ ಪ್ರಗತಿ ಕುರಿತು ಪರಿಶೀಲನೆ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸೇರಿದಂತೆ ಎಲ್ಲಾ ತಹಶೀಲ್ದಾರರು, ಕಂದಾಯ ನೀರಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಚಿತ್ರ ೦೨ ಕೆ.ಎಲ್.ಆರ್. ೦೧ ಜಿಲ್ಲಾಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ, ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net