ಜಿಲ್ಲಾಡಳಿತ ನಿಮ್ಮ ಬೆನ್ನಲುಬಾಗಿದೆ / ಎಸ್.ಎಸ್.ಎಲ್.ಸಿ. ಉತ್ತಮ ಫಲಿತಾಂಶ ನೀಡಿ / ಕಲಿಕೆಯಿಂದ ಹಿಂದುಳಿದ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಿ / ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾಡಳಿತ ನಿಮ್ಮ ಬೆನ್ನಲುಬಾಗಿದೆ. ಶಿಕ್ಷಕರು ಉತ್ತಮ ಫಲಿತಾಂಶ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಕಲಿಕೆಯಲ್ಲಿ ಹಿನ್ನೆಡೆ ಕಂಡಿರುವ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ಕ್ಷೇತ್ರದಲ್ಲಿಯೂ ಒತ್ತಡ ಇರುವಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಒತ್ತಡದ ಪರಿಸ್ಥಿತಿ ಇದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಸಾಮಾಜಿಕ ಸಮಸ್ಯೆ, ಕಲಿಕೆಗೆ ಅವಶ್ಯವಾದ ಮೂಲಸೌಲಭ್ಯಗಳಿಲ್ಲದಿರುವುದು ಸೇರಿದಂತೆ ಇತರೆ ಕಾರಣಗಳಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲಿದೆ. ಈ ಎಲ್ಲಾ ಸಮಸ್ಯೆಗಳನ್ನು ಮೀರಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಯೊಬ್ಬ ಶಿಕ್ಷಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೋಷಕರನ್ನು ಸಹ ಪ್ರೇರೇಪಿಸುವ ಕೆಲಸ ಆಗಬೇಕಿದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ-೧, ೨ ಮತ್ತು ೩ರ ಪರೀಕ್ಷೆಗಳಲ್ಲಿ ಎಲ್ಲ ತಾಲೂಕುಗಳಲ್ಲಿನ ಫಲಿತಾಂಶದಲ್ಲಿ ಬಾಲಕರ ಫಲಿತಾಂಶಕ್ಕೆ ಹಿನ್ನಡೆಯಾಗಿದೆ. ಇದು ಬದಲಾಗಬೇಕು. ಪೋಷಕರ ಸಹಕಾರ ಹಾಗೂ ಮಕ್ಕಳ ಬುದ್ಧಿಶಕ್ತಿಯ ರಚನೆ ವಿಶ್ಲೇಷಣೆಯಾಗಬೇಕು. ಕಲಿಕೆಯಲ್ಲಿ ಹಿನ್ನೆಡೆ ಕಂಡಿರುವ ಪ್ರತಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಶಿಕ್ಷಕರು ಪರಿಶೀಲಿಸಬೇಕು. ಎಲ್ಲಿ, ಏನು ಕೊರತೆಯಾಗಿದೆ ಎಂಬುದು ಅಲ್ಲಿ ಅರಿವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಆಧಿಕಾರಿಗಳು ಮುಂದಾಗುವAತೆ ಸೂಚಿಸಿದರು.

ಜಿಲ್ಲೆಯಲ್ಲಿ ಮಕ್ಕಳ ಕಲಿಕಾ ಸುಧಾರಣೆಗೆ ಅಗತ್ಯವಿರುವ ಮೂಲಸೌಲಭ್ಯಗಳು, ವಸತಿ ವ್ಯವಸ್ಥೆ, ಕಲಿಕಾ ವಾತಾವರಣ, ಪ್ರಶ್ನೆಪತ್ರಿಕೆಗಳ ಬ್ಲೂ ಪ್ರಿಂಟ್ ಒದಗಿಸಲು ಆದ್ಯತೆ ನೀಡಲಾಗುವುದು. ಅಲ್ಲದೆ ವಿವಿಧ ಇಲಾಖೆಗಳ ವಸತಿ ಶಾಲೆಗಳಿಗೆ ಆಯಾ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಕಲಿಕಾ ಹಿನ್ನಡೆ ಕಂಡುಬAದಿರುವ ಮಕ್ಕಳು, ಶಿಕ್ಷಕರು, ಪೋಷಕರೊಂದಿಗೆ ಸಂವಾದ ನಡೆಸಿ ಫಲಿತಾಂಶ ಹೆಚ್ಚಳಕ್ಕೆ ಪ್ರೇರೇಪಿಸಲಾಗುವುದು. ಒಟ್ಟಾರೆ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆ ಕೈಗೊಳ್ಳುವ ಸುಧಾರಣಾ ಕ್ರಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿದರು.

ಫಲಿತಾಂಶದಲ್ಲಿ ಹಿನ್ನಡೆಯಾಗಿರುವ ಶಾಲೆಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳ ಕಲಿಕೆಯಲ್ಲಿ ಮಕ್ಕಳು ಹಿಂದೆ ಉಳಿದಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಉತ್ತಮ ಫಲಿತಾಂಶ ನೀಡುವಂತೆ ಪ್ರೇರೇಪಿಸಬೇಕು. ಶಾಲೆಗೆ ಗೈರು ಹಾಜರಿ, ಸರಾಸರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಡಿಸಿ ಹಾಗೂ ಜಿಪಂ ಅಧಿಕಾರಿಗಳು ಶೈಕ್ಷಣಿಕ ವರ್ಷ ಆರಂಭದಿAದಲೂ ಬಹಳ ಆಸಕ್ತಿ ವಹಿಸಿ ಮಕ್ಕಳ ಕಲಿಕಾ ವೃದ್ಧಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲೆಯು ಅಳವಡಿಸಿಕೊಂಡಿರುವ ೧೪ ಹಾಗೂ ೨೦ ಅಂಶಗಳ ಕಾರ್ಯಕ್ರಮಗಳ ಅಂಶಗಳನ್ನು ಜಿಲ್ಲಾಧಿಕಾರಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಜಿಲ್ಲೆಯ ಕುಂದುಕೊರತೆ ಪರಿಹರಿಸಲು ಮುಂದಾಗಿದ್ದಾರೆ. ಕಳೆದ ಬಾರಿಯ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ನೀಡಲು ಎಲ್ಲರ ಪರಿಶ್ರಮ ಅವಶ್ಯವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪ್ರವೀಣ್ ಪಿ ಬಾಗೇವಾಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಷಯ ಪರಿವೀಕ್ಷಕರು, ಶಿಕ್ಷಣ ಕೋ ಆರ್ಡಿನೆಟರ್ ಗಳು, ವಸತಿ ಶಾಲೆಗಳ ಪ್ರಾಂಶುಪಾಲರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೨೯ ಕೆ.ಎಲ್.ಆರ್. ೦೪ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಮಾರ್ಗದರ್ಶನ ಕುರಿತ ಸಭೆ. ಸಿ.ಇ.ಓ.ಪ್ರವೀಣ್ ಪಿ.ಬಾಗೇವಾಡಿ, ಡಿ.ಡಿ.ಪಿ.ಐ.ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net