ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದರ ಬಗ್ಗೆ ಅರಿವು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕುಡಿಯುವ ನೀರು, ಜಾನುವಾರು ಮೇವು, ಕೃಷಿ ಬೆಳೆಗಳ ಬಿತ್ತನೆ ಬಗ್ಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ೧೩೩೩ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ೨೪೯ ಕೊಳವೆ ಬಾವಿಗಳು ಬತ್ತಿಹೋಗಿವೆ. ಗ್ರಾಮಿನ ಪ್ರದೇಶಗಳಲ್ಲಿ ೧೫೨೨ ಗ್ರಾಮಗಳಲ್ಲಿ ೩೪೨೫ ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ೧೩೫೦ ಕೊಳವೆ ಬಾವಿಗಳು ಬತ್ತಿಹೋಗಿವೆ. ಮುಂದಿನ ದಿನಗಳಲ್ಲಿ ೨೫೭ ಗ್ರಾಮಗಳಲ್ಲಿ ಹಾಗೂ ೨೬ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಪೂರಕವಾಗಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬೋರ್ವೆಲ್, ಪೈಪ್ ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದ ಎಲ್ಲವನ್ನು ಸಮರ್ಪಕವಾಗಿ ಸಿದ್ದಪಡಿಸಿಕೊಳ್ಳಲು ಸೂಚಿಸಿದರು. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ, ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ಸೂಚಿಸಿದರು.
೨೦೨೩-೨೪ ನೇ ಸಾಲಿನಲ್ಲಿ ಎಸ್. ಆರ್. ಡಿ. ಎಫ್ ಅನುದಾನದಡಿ ನಗರ ಪ್ರದೇಶಗಳಲ್ಲಿ ೧೩೧, ಗ್ರಾಮೀಣ ಪ್ರದೇಶಗಳಲ್ಲಿ ೩೦೫ ಒಟ್ಟು ೪೩೬ ಕೊಳವೆಬಾವಿಗಳನ್ನು ದುರಸ್ಥಿಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಗತ್ಯವಿರುವೆಡೆ ಈಗಾಗಲೇ ನಗರಸಭೆಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಯರಗೊಳ ಜಲಾಶಯದ ನೀರನ್ನು ಪ್ರತಿ ೪ ದಿನಗಳಿಗೊಮ್ಮೆ ಹಾಗೂ ಕೊಳವೆ ಬಾವಿ ನೀರನ್ನು ಪ್ರತಿ ಎರಡು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಸಾಧ್ಯ ವಾಗುವುದಾದರೆ ಯಾರಗೊಳ ನೀರನ್ನು ಎರಡು ದಿನಗಳಿಗೊಮ್ಮೆ ಪೂರೈಸಲು ಕ್ರಮ ವಹಿಸಬೇಕು ಎಂದರು.
ರಾಜ್ಯ ವಿಪತ್ತು ನಿರ್ವಹನಾ ಅನುದಾನದಲ್ಲಿ ೪.೭೫ ಕೋಟಿ ಮೊತ್ತದ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ೨೯ ವಾರಗಳಿಗೆ ಸಾಕಾಗುವಷ್ಟು ೩೩೮೬೪೦ ಟನ್ ಗಳಷ್ಟು ಜಾನುವಾರು ಮೇವು ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟು ಶೇ. ೬.೯೧ ರಷ್ಠು ನೀರಾವರಿ ಕೃಷಿ ಬೆಳೆಗಳ ಬಿತ್ತನೆ ಆಗಿದೆ. ಪ್ರಸ್ತುತ ೯೬೭೫ ಮೆ. ಟನ್ ನಷ್ಟು ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಅಧಿಕಾರಿಗಳು ಸಭೆಗ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಎಲ್ಲಾ ತಾಲುಕುಗಳ ತಹಸೀಲ್ದಾರ್ ರವರು ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ೧೬ ಕೆ.ಎಲ್.ಆರ್. ೧೪ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಮಂಗಳ, ಸಿಇಓ ಡಾ. ಪ್ರವೀಣ್. ಪಿ. ಬಾಗೇವಾಡಿ ಇದ್ದರು.