

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಜಮಾವಣೆಗೊಂಡ ವಕೀಲರು ಶೂ ತೂರಿದ ವಕೀಲ ರಾಕೇಶ್ ಕಿಶೋರ್ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿರುವುದು ಖಂಡನೀಯ. ವಕೀಲರು ನ್ಯಾಯಾಂಗ ವ್ಯವಸ್ಥೆಯ ಹೃದಯಭಾಗ. ಇದು ನ್ಯಾಯಾಂಗ ವ್ಯವಸ್ಥೆ, ಸಂವಿಧಾನಕ್ಕೆ ಆಗಿರುವ ಗಾಯ ಎಂದು ಕಿಡಿ ಕಾರಿದರು.
ವಕೀಲರ ಸಂಘದಲ್ಲಿ ಸಭೆ ನಡೆಸಿ ರಾಕೇಶ್ ಕಿಶೋರ್ ಕೃತ್ಯ ಖಂಡಿಸಲಾಗಿದೆ. ನ್ಯಾಯಮೂರ್ತಿ ಗವಾಯಿ ಅವರು ಈ ಘಟನೆಯಿಂದ ಧೃತಿಗೆಡಬಾರದು, ಅವರೊಂದಿಗೆ ನಾವಿದ್ದೇವೆ. ರಾಕೇಶ್ ಕಿಶೋರ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಿ, ಗೃಹಸಚಿವರಿಗೆ ಪತ್ರ ಬರೆಯಲಾಗಿದೆ. ಅವರನ್ನು ಯಾರಾದರೂ ರಕ್ಷಣೆ ಮಾಡಲು ಪ್ರಯತ್ನಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಚರಣ್‌ರಾಜ್‌ಕುಮಾರ್, ಸುಧೀರ್ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.
ಚಿತ್ರ ಸಂಖ್ಯೆ...2,3
* ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಬುಧವಾರ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು.