ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಭಾಜನ ಹೆಮ್ಮೆಯ ಸಂಗತಿ

10NGD1
ನಂಜನಗೂಡಿನಲ್ಲಿ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಮಲ್ಲನಮೂಲೆ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಅಧ್ಯಕ್ಷೆ ಎಚ್.ಎಂ.ನಂದಿನಿ ಮಹೇಶ್, ಪ್ರಣಮ್ಯಾ, ಕೋಮಲಾ ಇದ್ದರು.
Published on

ನಂಜನಗೂಡು: ಆರ್ಥಿಕ ಶಿಸ್ತು, ಕಾರ್ಯ ಚಟುವಟಿಕೆ ಹಾಗೂ ಸಾಮಾಜಿಕ ಸೇವಾ ಕಾರ್ಯವನ್ನು ಪರಿಗಣಿಸಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸಂಘ ಭಾಜನವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಎಚ್.ಎಂ.ನಂದಿನಿ ಮಹೇಶ್ ಹೇಳಿದರು.


ಮಲ್ಲನಮೂಲೆ ಶ್ರೀ ಗುರುಕಂಬಳೀಶ್ವರ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.


ಸಂಘದ ಕಾರ್ಯಚಟುವಟಿಕೆ ಹಾಗೂ ಆರ್ಥಿಕ ಶಿಸ್ತಿನಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನವಾಗುವ ಹಿಂದೆ ಪ್ರತಿಯೊಬ್ಬ ಸದಸ್ಯರ ಸಹಕಾರವನ್ನು ಮರೆಯುವಂತಿಲ್ಲ. ಮಹಿಳೆಯರು ದೃಢಸಂಕಲ್ಪದೊಂದಿಗೆ ಹೆಜ್ಜೆ ಇಟ್ಟರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಮ್ಮ ಸಂಘ ನಿದರ್ಶನವಾಗಿದೆ. 9 ವರ್ಷಗಳಿಂದಲೂ ಸಂಘ ಆರ್ಥಿಕವಾಗಿ ಲಾಭದತ್ತ ಮುನ್ನಡೆಯುತ್ತಿದ್ದು, 2022-23ನೇ ಸಾಲಿನಲ್ಲಿ 1.06 ಕೋಟಿ ರೂ. ವಹಿವಾಟು ನಡೆಸಿ 11.18 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.


ಇನ್ನು ಸಂಘಕ್ಕೆ ಸ್ವಂತ ನಿವೇಶನ ಖರೀದಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ನಡೆಸಿದ್ದು, ಮಹದೇಶ್ವರ ಲೇಔಟ್‌ನಲ್ಲಿ ಸಿಎ ನಿವೇಶನಕ್ಕೆ ಮುಡಾದಲ್ಲಿ ಅರ್ಜಿ ಹಾಕಿದ್ದು ಸಂಘಕ್ಕೆ ನಿವೇಶನ ಗುರುತಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಂಘದ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಸಂಘಕ್ಕೆ ನಿವೇಶನ ನೋಂದಣಿ ಮಾಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.


ಬೆಂಗಳೂರಿನ ಇನ್ಸ್‌ಪೈರ್ ಫುಡ್ ಇಂಡಸ್ಟ್ರಿ ಮಾಲೀಕರಾದ ಪ್ರಣಮ್ಯಾ ಮಾತನಾಡಿ, ಮಹಿಳೆಯರ ಸಬಲೀಕರಣದ ಮೇಲೆ ದೇಶದ ಜಿಡಿಪಿ ಅವಲಂಬಿಸಿದೆ. ನಂಜನಗೂಡಿನಲ್ಲಿ ಮಹಿಳೆಯರೇ ಸೇರಿ ಸಹಕಾರ ಸಂಘವನ್ನು ಆರ್ಥಿಕವಾಗಿ ಮುನ್ನಡೆಸುವ ಮೂಲಕ ಮಾದರಿಯಾಗಿದ್ದಾರೆ. ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ಲಿಂಗ, ಜಂಗಮ, ಕಾಯಕ, ಭಕ್ತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು. ಒಳಿತನ್ನು ಸಮಾಜಕ್ಕೆ ನೀಡುವುದೇ ನಿಜವಾದ ಶರಣ ಸಂಸ್ಕೃತಿ ಎಂಬ ಸತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.


ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೂಡ್ಲಾಪುರ ಗ್ರಾಮದ ವಿದ್ಯಾರ್ಥಿನಿ ವಿದ್ಯಾ ಅವರ ಉನ್ನತ ವ್ಯಾಸಂಗಕ್ಕಾಗಿ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಮಲ್ಲನಮೂಲೆ ಗುರುಕಂಬಳೀಶ್ವರ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಂಘದ ಕಾರ್ಯದರ್ಶಿ ನೇತ್ರಾವತಿ ಸೋಮಣ್ಣ, ಉಪಾಧ್ಯಕ್ಷೆ ಉಷಾ, ನಿರ್ದೇಶಕರಾದ ಕೋಮಲಾ ಮಹಾಲಿಂಗಸ್ವಾಮಿ, ಭ್ರಮರಾಂಬಿಕೆ, ಸುಜಾತಾ, ಗುಣವತಿ, ಚೈತ್ರಾ, ಶ್ರೀಧರಿ, ಮಲ್ಲಮ್ಮಣಿ, ಶಿವಮ್ಮ, ಭಾಗ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net