ಜಿಲ್ಲಾ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಸಿಎ ನಿವೇಶನ ನೀಡಲು ಮನವಿ / ಸಮುದಾಯದ ಹೆಣ್ಣು ಮಕ್ಕಳ ಉಚಿತ ಹಾಸ್ಟೆಲ್, ಕೋಚಿಂಗ್ ಸೆಂಟರ್ ಪ್ರಾರಂಭಿಸಲು ಚಿಂತನೆ / ಶ್ರೀನಿವಾಸರೆಡ್ಡಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯ ಹಾಗೂ ಉಚಿತ ಕೋಚಿಂಗ್ ತರಬೇತಿ ನಡೆಸಲು ಅನುವಾಗುವಂತೆ ನಾಗರೀಕ ಸೌಲಭ್ಯ ನಿವೇಶನವನ್ನು ಹಂಚಿಕೆ ಮಾಡುವಂತೆ ಸಂಘದ ಪದಾಧಿಕಾರಿಗಳು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀನಾಥ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ನಗರಾಭಿವೃದ್ದಿ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ ನಂತರ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶ್ರೀನಿವಾಸರೆಡ್ಡಿ ಮಾತನಾಡಿ, ಒಕ್ಕಲಿಗ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸುಮಾರು ವರ್ಷಗಳ ಬೇಡಿಕೆಯಾದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯ ಸ್ಥಾಪಿಸಲು ಹಾಗೂ ಉಚಿತ ಕೋಚಿಂಗ್ ತರಗತಿಗಳನ್ನು ನಡೆಸಲು ಕಟ್ಟಡವನ್ನು ನಿರ್ಮಿಸಲು ಅನುಕೂಲವಾಗುವಂತೆ ನಗರದ ಆರ್.ವಿ ಗಾರ್ಡನ್ ಲೇಔಟ್‌ನಲ್ಲಿ ೩೧೯ ಚದರ ಮೀಟರ್ ವಿಸ್ತಾರವಾದ ನಾಗರೀಕ ಸೌಲಭ್ಯ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿ ಸಮುದಾಯದ ಪ್ರಗತಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಂಘವನ್ನು ಸೇವಾ ಮನೋಭಾವನೆಯ ಉದ್ದೇಶವಿಟ್ಟುಕೊಂಡು ೧೯೯೭ ರಲ್ಲಿ ಸ್ಥಾಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡುವುದು ಪ್ರತಿಭಾವಂತ ಅರ್ಹ ಬಡ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುವುದು, ಉದ್ಯೋಗ ಮಾಹಿತಿ ಕೇಂದ್ರ ತೆರೆದು ವೃತ್ತಿ ಮಾರ್ಗದರ್ಶನ ನೀಡುವುದು ಸಂಘದ ಸದಸ್ಯರ ಮತ್ತು ಅವರ ಕುಟುಂಬದವರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹ ನೀಡುವುದು, ಒಕ್ಕಲಿಗರ ವಧು-ವರರ ಅನ್ವೇಷಣಾ ಕೇಂದ್ರ ತೆರೆದು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವುದು, ಗ್ರಂಥಾಲಯ ಹಾಗೂ ಬುಕ್ ಬ್ಯಾಂಕ್ ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ನಾಗರೀಕ ಸೌಲಭ್ಯಗಳುಳ್ಳ ನಿವೇಶನವನ್ನು ರಿಯಾಯಿತಿ ದರದಲ್ಲಿ ನಗರಾಭಿವೃದ್ದಿ ಹಂಚಿಕೆ ಮಾಡಿದಲ್ಲಿ ಒಕ್ಕಲಿಗರ ನೌಕರರ ಕ್ಷೇಮಾಭಿವೃದ್ದಿ ಸಂಘದ ಖಾತೆಯಲ್ಲಿರುವ ೧೫ ಲಕ್ಷ ರುಪಾಯಿಗಳಿದ್ದು, ಇನ್ನುಳಿದ ಅನುದಾನವನ್ನು ಬೇರೆ ಬೇರೆ ರೂಪದಲ್ಲಿ ಸಂಗ್ರಹಿಸಿ ಸಮುದಾಯದ ಬಡ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯ ಕಟ್ಟಡವನ್ನು ನಿರ್ಮಿಸಲಾಗುವುದು. ಇದರ ಜೊತೆ ಸದರಿ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಚಿತ ಕೋಚಿಂಗ್ ತರಗತಿಗಳನ್ನು ಎಲ್ಲಾ ವರ್ಗದ ಅಸಕ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ, ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.

ಜಿಲ್ಲಾ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೈಚಪ್ಪ, ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಅನಿಲ್ ಕುಮಾರ್, ಸಂಘದ ಪದಾಧಿಕಾರಿಗಳಾದ ಪುರುಷೋತ್ತಮ ರೆಡ್ಡಿ, ಗಿರೀಶ್ ಇದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೩ : ವಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡಬೇಕೆಂದು ಸಂಘದ ಪದಾಧಿಕಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀನಾಥ್ ರವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net