

ಬೆಂಗಳೂರು: ಪೊಕ್ಸೋ ಪ್ರಕರಣದಲ್ಲಿ ತಮಗೆ ನೀಡಿರುವ ಜಾಮೀನಿನ ಷರತ್ತು ಸಡಿಲಿಸುವಂತೆ ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ಸಂಬಂಧ ಸೋಮವಾರ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತು ಸಡಿಲಿಕೆ ಕೋರಿ ಬಿಎಸ್‌ವೈ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು .
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್, ‘‘ಅರ್ಜಿದಾರರು ಹಿರಿಯ ರಾಜಕಾರಣಿಯಾಗಿರುವುದರಿಂದ ದೆಹಲಿಗೆ ತೆರಳಬೇಕಿದೆ. ಅವರು ರಾಜಕೀಯ ಪಕ್ಷದ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ. ಹಾಗಾಗಿ ಅವರು ನ್ಯಾಯಾಲಯದ ವ್ಯಾಪ್ತಿ ಬಿಟ್ಟು ದೆಹಲಿ ಮತ್ತಿತರ ಕಡೆ ಸಂಚಾರ ಮಾಡಲು ಅನುವಾಗುವಂತೆ ಷರತ್ತು ಸಡಿಲಿಸಬೇಕು’ ಎಂದು ಮನವಿ ಮಾಡಿದರು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚನೆ ನೀಡಿ ಬೇಸಿಗೆ ರಜೆ ಮುಗಿದ ನಂತರ ಅರ್ಜಿಯನ್ನು ವಿಚಾರಣೆಗೆ ನಿಗದಿ ಮಾಡುವಂತೆ ಆದೇಶಿಸಿತು.