ಜಾಮೀನು ಇಲ್ಲ, ನಿರೀಕ್ಷಣಾ ಜಾಮೀನೂ ಇಲ್ಲ!

CCB
Published on

ಬೆಂಗಳೂರು : ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ನಂಟು ಪ್ರಕರಣದಲ್ಲಿ ಬಂಧಿತ ನಾಲ್ವರ ಜಾಮೀನು ಅರ್ಜಿ ಮತ್ತು ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿವೆ.

ಡ್ರಗ್ಸ್ ಕೇಸಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಪೇಜ್-3 ಪಾರ್ಟಿ ಆಯೋಜಕ ಪ್ರಶಾಂತ್ ರಾಂಕಾ, ನಯಾಜ್ ಮಹಮ್ಮದ್, ವೈಭವ್ ಜೈನ್ ಮತ್ತು ಪೆಡ್ಲರ್ ಪ್ರತೀಕ್ ಶೆಟ್ಟಿ, ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಎನ್‌ಡಿಪಿಎಸ್ ವಿಶೇಷ ಕೋರ್ಟ್, ವಾದ-ಪ್ರತಿವಾದ ಆಲಿಸಿ ಸೋಮವಾರ ವಜಾಗೊಳಿಸಿದೆ.

ತಲೆಮರೆಸಿಕೊಂಡಿರುವ ಆರೋಪಿಗಳಾದ ಅಭಿಸ್ವಾಮಿ ಮತ್ತು ಪ್ರಶಾಂತ್ ರಾಜು ಸಹ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣ ತನಿಖೆ ಹಂತದಲ್ಲಿದೆ. ಕೆಲ ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ. ಕೆಲವರು ತಲೆಮರೆಸಿಕೊಂಡಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಆಗುವ ಸಾಧ್ಯತೆ ಇರುವುದಾಗಿ ಸಿಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ, ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಡ್ರಗ್ಸ್ ಕೇಸ್ ಗಂಭೀರ ಪ್ರಕರಣವಾಗಿದೆ. ಆರೋಪಿಗಳನ್ನು ಬಂಧಿಸಿಯೇ ವಿಚಾರಣೆ ನಡೆಸಬೇಕಾಗಿದೆ. ತನಿಖೆಯ ಹಾದಿ ತಪ್ಪಿಸುವ ಸಲುವಾಗಿಯೇ ಆರೋಪಿಗಳು ಭೂಗತವಾಗಿದ್ದಾರೆ. ಆದ್ದರಿಂದ ನಿರೀಕ್ಷಣಾ ಜಾಮೀನು ಕೊಡಬಾರದು ಎಂದು ಮನವಿ ಮಾಡಿದ್ದರು.

ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿಯರಾದ ರಾಗಿಣಿ, ಸಂಜನಾ, ಪಾರ್ಟಿಗಳ ಆಯೋಜಕ ರಾಹುಲ್ ತೋನ್ಸೆ ಜಾಮೀನು ಅರ್ಜಿ ಹಾಗೂ ತಲೆಮರೆಸಿಕೊಂಡಿರುವ ಶಿವಪ್ರಕಾಶ್ ಮತ್ತು ವಿನಯ್ ಕುಮಾರ್ ಎಂಬುವರ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡಿದ್ದವು. ಈ ಎಲ್ಲ ಆರೋಪಿಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net