

ಲಿಂಗದಹಳ್ಳಿ: ರಾಜ್ಯಾದ್ಯಂತ ಈ ವರ್ಷದ ಮೊದಲನೇ ಸುತ್ತಿನ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ನಂದಿಬಟ್ಟಲು ಪಶು ವೈದ್ಯಾಧಿಕಾರಿ ಡಾ. ಗೋವಿಂದಪ್ಪ ಹೇಳಿದರು.
ಬುಧವಾರ ನಂದಿಬಟ್ಟಲು ಚಿಕಿತ್ಸಾಲಯದಿಂದ ತಿಗಡ ಗ್ರಾಪಂ ಜಯಪುರ ಗ್ರಾಮದಲ್ಲಿ ಸಾಕುಪ್ರಾಣಿಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆಗಳನ್ನು ನೀಡಿ ಮಾತನಾಡಿದರು.
ನಂದಿಬಟ್ಟಲು ಪಶು ಚಿಕಿತ್ಸಾಲಯದಿಂದ ನಂದಿಬಟ್ಟಲು ಮತ್ತು ತಿಗಡ ಗ್ರಾಪಂ ವ್ಯಾಪ್ತಿಯ ಸುಮಾರು ಎರಡು ಸಾವಿರ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧ ಲಸಿಕೆ ನೀಡಲಾಗುತ್ತಿದೆ. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ಎಚ್ಚರಿಕೆ ಕೈಗೊಳ್ಳಬೇಕು ಎಂದು ಹೇಳಿದರು.
ನಂದಿಬಟ್ಟಲು ಮತ್ತು ತಿಗಡ ಗ್ರಾಪಂ ವ್ಯಾಪ್ತಿಯ ಗ್ರಾಮಗಳೆಲ್ಲವೂ ಭದ್ರಾ ವನ್ಯಜೀವಿ ವಿಭಾಗ, ತಣಿಗೆಬೈಲು ವಲಯಾರಣ್ಯದ ಅಂಚಿನಲ್ಲೇ ಇರುವ ಕಾರಣ ಸಾಕುಪ್ರಾಣಿಗಳಿಂದ ವನ್ಯ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡು ಕುರಿ, ಕಾಡುಕೋಣ ಮುಂತಾದ ಕಾಡು ಪ್ರಾಣಿಗಳಿಗೆ ಕಾಲುಬಾಯಿ ಜ್ವರದಂತಹ ಅಂಟು ರೋಗಗಳು ಸುಲಭವಾಗಿ ಹರಡುವ ಸಂಭವವಿದೆ ಎಂದರು.
2011ನೇ ಸಾಲಿನಲ್ಲಿ ವ್ಯಾಪಕವಾಗಿ ಹರಡಿದ್ದ ಅಂಟು ರೋಗಗಳಿಂದ ಭದ್ರಾ ವನ್ಯಜೀವಿ ಅರಣ್ಯದಲ್ಲಿದ್ದ ನೂರಾರು ವನ್ಯಜೀವಿಗಳ ಮಾರಣ ಹೋಮ ನಡೆದಿದೆ. ಹೀಗಾಗಿ ಈ ಭಾಗದ ಜಾನುವಾರು ಸಾಕಣೆದಾರರು ರಾಸುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ನಿರೋಧಕ ಲಸಿಕೆಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ಪಶು ನಿರೀಕ್ಷಕರಾದ ಸಖರಾನಾಯಕ್, ಸಿಬ್ಬಂದಿ ಸುಚಿತ್ರಮ್ಮ ಅವರು ಸಾಕುಪ್ರಾಣಿಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆಗಳನ್ನು ನೀಡಿದರು.