

ಎನ್.ಆರ್.ಪುರ: ಜಾನಪದ ಕಲೆ ಉಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಹೇಳಿದರು.
ತಾಲೂಕಿನ ಬಿ.ಎಚ್.ಕೈಮರದಲ್ಲಿನ ಬ್ರಹ್ಮರ್ಷಿ ನಾರಾಯಣಗುರು ಸಮಾಜ ಸೇವಾ ಸಂಘದ ಸಮುದಾಯ ಭವನದಲ್ಲಿ ರಾಜ್ಯ ಜಾನಪದ ಪರಿಷತ್, ಜಿಲ್ಲಾ ಜಾನಪದ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತ್ಯದ ಮೂಲ ಜಾನಪದವಾಗಿದೆ. ಎಲ್ಲ ಜಾತಿ, ಧರ್ಮದ ಎಲ್ಲೆ ಮೀರಿರುವ ಸಾಹಿತ್ಯ ಜಾನಪದ. ಭಾರತದ ಎಲ್ಲ ಸಾಹಿತ್ಯಗಳ ಮೂಲವೂ ಆಗಿದೆ. ಜಾನಪದ ಕಲೆ, ಸಾಹಿತ್ಯ ಅಲಿಖಿತವಾಗಿದೆ. ಸಾಂಸ್ಕೃತಿಕ ವಲಯದಲ್ಲಿ ರಾಜಕೀಯ ಬಂದಿರುವುದು ವಿಷಾದದ ಸಂಗತಿ. ಸಾಂಸ್ಕೃತಿಕ ನೀತಿ ಜಾರಿಯಾಗಬೇಕು. ಕನ್ನಡ ಜಾನಪದ ಪರಿಷತ್‌ನಿಂದ ಮಹಿಳಾ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಜಾನಪದ ಬಾಯಿಂದ ಬಾಯಿಗೆ ಬೆಳೆದು ಬಂದ ಸಂಸ್ಕೃತಿ. ಇದನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು.
ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಜಯಂತಿ ರಮೇಶ್ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ಕೆ.ಟಿ.ನಾಗರತ್ನಾ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ನಾರಾಯಣಗುರು ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ವಾಸುದೇವ, ಮುಖ್ಯಶಿಕ್ಷಕ ಅಶೋಕ್, ಶಿವರತ್ನಾ, ಕೆ.ಎಸ್.ರಾಜಕುಮಾರ್, ಭವಾನಿ ಇದ್ದರು. ಕೋಡಿಹಳ್ಳಿ ಜಾನಪದ ಕಲಾವಿದೆ ಉಮಾ ನಾರಾಯಣಸ್ವಾಮಿ, ವರ್ಕಾಟೆ ಜಾನಪದ ಕಲಾವಿದೆ ಸರಸ್ವತಿ, ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯೆ ಜಾನಕಮ್ಮ, ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.