

ಕಡೂರು: ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಜಾನಪದ ಸಂಸ್ಕೃತಿ ಅಗತ್ಯ ಎಂದು ಅಜ್ಜಂಪುರ ಪಿಎಸ್‌ಐ ವೀರೇಂದ್ರ ತಿಳಿಸಿದರು.
ಅಜ್ಜಂಪುರ ತಾಲೂಕಿನ ಚಿಕ್ಕಾನಂಗಲ ಗ್ರಾಮದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಅಜ್ಜಂಪುರ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಜಾನಪದ ಕಲೆಗಳ ಮಹಾಸಂಗಮ ಮತ್ತು ಜಾನಪದ ಗೀತೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯುವಸಮೂಹಕ್ಕೆ ಜಾನಪದ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲ ಸಾಹಿತ್ಯಗಳ ಮೂಲ ಬೇರು ಜಾನಪದ ಆಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರೌಢಶಾಲಾ ಶಿಕ್ಷಕ ಪುಟ್ಟಸ್ವಾಮಿ ಮಾತನಾಡಿ, ಜಾನಪದವೇ ಜೀವನ. ಜಾನಪದ ಸಂಸ್ಕೃತಿ, ಕಲೆ, ಸಂಗೀತವನ್ನು ಹೊರತುಪಡಿಸಿ ಜೀವನವಿಲ್ಲ. ಯುವ ಪೀಳಿಗೆ ಜಾನಪದ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದರು. ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಆರ್.ನಾಗೇಶ್, ಸಂಗೀತ ಶಿಕ್ಷಕ ಜಗದೀಶ್ವರ ಆಚಾರ್, ಚಿಕ್ಕಾನಂಗಲ ಶಂಕರಪ್ಪ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ತರಬೇತಿ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಹಾಡುಗಳ ಬಗ್ಗೆ ಪರಿಚಯಿಸಲಾಯಿತು. ಗೊಂಡೇದಹಳ್ಳಿ ತಿಪ್ಪೇಶ್, ಮರುಳಸಿದ್ದಪ್ಪ, ಡಾ. ಮಾಳೇನಹಳ್ಳಿ ಬಸಪ್ಪ, ಶಿವಕುಮಾರ್, ಪ್ರಾಧ್ಯಾಪಕ ಆನಂದ್, ರಾಜಣ್ಣ ಮತ್ತಿತರರಿದ್ದರು.