ಜಾತಿಗಣತಿಯಲ್ಲಿ ಲೋಪದೋಷವಾಗದಂತೆ ಗಮನಹರಿಸಿ

Arun Kumar
Published on

ಚಾಮರಾಜನಗರ: ರಾಜ್ಯದಲ್ಲಿ ಒಳಮೀಸಲಾತಿ ವರ್ಗೀಕರಣದ ಉದ್ದೇಶದಿಂದ ಮೇ.5 ರಿಂದ ಪ್ರಾರಂಭವಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದತ್ತಾಂಶ ಸಮೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಜಾಗೃತಿ ವಹಿಸಬೇಕು ಎಂದು ರಾಜ್ಯ ನ್ಯಾಯಪರ ವಕೀಲರ ವೇದಿಕೆ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ ಆಗ್ರಹಿಸಿದರು.

ಜಿಲ್ಲೆಯ ಮಹದೇಶ್ವರಬೆಟ್ಟ, ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಲ್ಲೂರು, ಮಾರ್ಟಳ್ಳಿ, ಹೂಗ್ಯಂ, ಮೀಣ್ಯಂ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಮಾದಿಗರ ಜನಸಂಖ್ಯೆ ಹೆಚ್ಚಾಗಿದೆ. ಈ ಗ್ರಾಮಗಳು ಕಾಡಂಚಿನಲ್ಲಿ ಬರುವುದರಿಂದ ಸೂಕ್ತ ರೀತಿಯಲ್ಲಿ ಸಮೀಕ್ಷೆಯನ್ನು ನಡೆಸಬೇಕು. ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ, ವಿಶೇಷ ಗಮನವನ್ನು ನೀಡಿ ಮಾದಿಗ ಸಮುದಾಯದವರನ್ನು ಖಚಿತವಾಗಿ ನೋಂದಣಿ ಮಾಡಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಡೆಯಲಿರುವ ಜಾತಿ ಸಮೀಕ್ಷೆಯ ಸಂಬಂಧ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು. ಸಮೀಕ್ಷೆಯ ವೇಳೆಯಲ್ಲಿ ತಪ್ಪು ಮಾಹಿತಿಯನ್ನು ಕಳೆ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ವಹಿಸಬೇಕು. ಎಸ್ಸಿ, ಎಸ್ಟಿ ದತ್ತಾಂಶ ಸಮೀಕ್ಷೆ ಸಂಪೂರ್ಣ ನ್ಯಾಯಯುತವಾಗಿ ನಡೆಯಬೇಕು. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಜನರು ಸಮೀಕ್ಷೆಯಲ್ಲಿ ಮಾದಿಗ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ಮಾಲಪ್ಪ ಕುಲ್ಕಿ, ಮುತ್ತುರಾಜ್, ಗಂಗಾಧರ್, ಪರಶಿವ ಹಾಜರಿದ್ದರು.

ಕಾಂಗ್ರೆಸ್‌ನಿಂದ ಮಾದಿಗರಿಗೆ ಅನ್ಯಾಯ:

ರಾಜ್ಯದಲ್ಲಿ ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಕಮಿಟಿ ವರದಿ ಹಾಗೂ ಇತ್ತೀಚೆಗೆ ಸೋರಿಕೆಯಾಗಿರುವ ಕಾಂತರಾಜ್ ಆಯೋಗದ ವರದಿಯ ದತ್ತಾಂಶಗಳು ಇದ್ದರೂ ಒಳಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾತಿ ದತ್ತಾಂಶ ಸಮೀಕ್ಷೆ ನಡೆಸುತ್ತಿರುವುದು ಮಾದಿಗ ಸಮುದಾಯಕ್ಕೆ ಅನ್ಯಾಯ ಎಸಗುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಕೀಲ ಅರುಣ್‌ಕುಮಾರ್ ಆರೋಪಿಸಿದರು. ಎಲ್ಲಾ ವರದಿಗಳಲ್ಲೂ ಮಾದಿಗರ ಜನಸಂಖ್ಯೆ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಮಾದಿಗರು ಮತ್ತು ಹೊಲೆಯರ ನಡುವೆ ಮಾತ್ರ ಪೈಪೋಟಿ ನಡೆಯುತ್ತಿದ್ದು, ಮಾದಿಗರಿಗಿಂತಲೂ ಹೊಲೆಯರು ಮೇಲು ಎಂದು ಸಾಬೀತು ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಎಸ್ಸಿ,ಎಸ್ಟಿ ಜಾತಿ ಜನಗಣತಿಯನ್ನು ನಡೆಸುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net