

ಕೆ.ಆರ್.ನಗರ: ಮುಂಬರುವ ಚುನಾವಣೆಯಲ್ಲಿ ನಾನು ಗೆದ್ದರೆ ಜಾತಿ ರಾಜಕಾರಣ ಮಾಡುವವರೆಲ್ಲಾ ಮನೆ ಸೇರಿಕೊಳ್ಳುತ್ತಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ಕುರುಬ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು 14 ವರ್ಷಗಳ ಅಧಿಕಾರ ಅವಧಿಯಲ್ಲಿ ವಿಶೇಷ ಅನುದಾನ ನೀಡಿಲ್ಲವಾದರೂ ಮೂಲಸೌಕರ್ಯ ಒದಗಿಸುವಲ್ಲಿ ತಾರತಮ್ಯ ಮಾಡಿಲ್ಲ ಎಂದರು.
ನಾನು ಕೆ.ಆರ್.ನಗರದ ರಾಜಕಾರಣಕ್ಕೆ ಬಂದಾಗಿನಿಂದ ಕೆಲವು ಕುರುಬ ಸಮುದಾಯದ ಮುಖಂಡರು ಜತೆಯಲ್ಲಿದ್ದಾರೆ. ಈ ಬಾರಿ ಹೆಚ್ಚು ಜನ ಕುರುಬರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಸಹಕಾರ ಮಾಡಲು ಸಾಧ್ಯವಾಗದಿದ್ದರೂ ಸಾರ್ವಜನಿಕವಾಗಿ ಅವರು ಹೇಳಿದ ಕೆಲಸಗಳನ್ನು ಮಾಡಲು ಸಿದ್ಧ್ದನಿದ್ದೇನೆ ಎಂದು ಭರವಸೆ ನೀಡಿದರು.
ರಾಜಕಾರಣದಲ್ಲಿ ಬಡವರಿಗೆ ಸಹಾಯ ಮಾಡಬಹುದೆಂದು ತೋರಿಸಿಕೊಟ್ಟಿದ್ದೇ ನಾನು. ಇದನ್ನು ನಂತರ ಬೇರೆಯವರು ಮಾಡುತ್ತಿದ್ದಾರೆ ಎಂದರು.
ಎರಡು ಬಾರಿ ಸೋತಿದ್ದೇನೆ, ಈ ಬಾರಿ ನನ್ನನು ಗೆಲ್ಲಿಸಿ ಎಂದು ಹೇಳುವ ಕಾಂಗ್ರೆಸ್ ಮುಖಂಡ 3 ಬಾರಿ ಜಿಪಂ ಸದಸ್ಯರಾದಾಗಲೂ ಏನು ಸೇವೆ ಮಾಡಿದರು ಎಂದು ಅವರು ವ್ಯಂಗ್ಯವಾಡಿದರು.
ಜಿಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್ ಮಾತನಾಡಿ, ಕುರುಬ ಸಮಾಜದ ಮುಖಂಡರು ತೋರ್ಪಡಿಕೆಗೆ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿಲ್ಲ ಎಂದರು.
ಕುರುಬ ಸಮಾಜವನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆ. ಅಧಿಕಾರ ನೀಡುವ ಸಂದರ್ಭ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ತಾಪಂ ಮಾಜಿ ಅಧ್ಯಕ್ಷ ತಂದ್ರೆ ರವಿ, ಮಾಜಿ ಸದಸ್ಯ ನಾಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜು ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ಕುರುಬ ಸಮಾಜದ ಮುಖಂಡರಾದ ಲಾರಿ ಬಸವರಾಜು, ಅಂಗಡಿ ಶಿವಣ್ಣ, ಶಿವರಾಮ್, ಬಂಗಾರಿ ತಮ್ಮೇಗೌಡ, ಕೆಸ್ತೂರು ಧನು, ಯಶ್ವಂತ್, ಹೇಮಂತ್, ರಮೇಶ್, ಗಂಧನಹಳ್ಳಿ ಮಹದೇವ್ ಇತರರು ಇದ್ದರು.