ಜಾತಿ, ಧರ್ಮಗಳ ಸಂಕೋಲೆಗಳಿಗೆ ಸಿಲುಕದಿರಿ

19
Published on

ಯುವ ಕಾಂಗ್ರೆಸ್ ಕಾರ್ಯಕರ್ತರು ಜಾತಿ, ಧರ್ಮಗಳ ಸಂಕೋಲೆಗಳಿಗೆ ಸಿಲುಕಿಕೊಳ್ಳಬೇಡಿ. ಮಾನವೀಯತೆ ಹಾಗೂ ಕಾಂಗ್ರೆಸ್ ಪಕ್ಷವೇ ನಿಮ್ಮ ಜಾತಿಯಾಗಬೇಕು. ಒಂದು ನೀತಿ, ಸಿದ್ಧಾಂತದ ಮೇಲೆ ಕೊನೆಯತನಕ ಬದುಕಬೇಕು. ಯುವ ಕಾಂಗ್ರೆಸ್ಸಿನಿಂದ ಬೆಳೆದವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಯುವ ಕಾಂಗ್ರೆಸ್, ಕರ್ನಾಟಕ ಪ್ರದೇಶದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಯುವ ಕಾರ್ಯಕರ್ತರಿಗೆ ಆಯೋಜಿಸಿದ್ದ ಮೂರು ದಿನಗಳ ಯುವ ಕ್ರಾಂತಿ ಬುನಾದಿ ಕಾರ್ಯಕಾರಿ ತರಬೇತಿ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ, ಅದರ ಶಕ್ತಿಯೇ ದೇಶದ ಶಕ್ತಿ. ಕಾಂಗ್ರೆಸ್ ಪಕ್ಷ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರೃ ಕೊಡಿಸಿದೆ. ಸಂವಿಧಾನ, ರಾಷ್ಟ್ರಗೀತೆ, ಧ್ವಜ ಎಲ್ಲವನ್ನೂ ಕೊಟ್ಟಿದೆ. ಎಲ್ಲರಿಗೂ ಅಧಿಕಾರ ಕೊಟ್ಟಿದೆ. ಪಕ್ಷವು ಯುವ ಜನರ ನಂಬಿಕೆ ಇಟ್ಟಿದೆ ಎಂದರು.

ಈ ದೇಶದ ಯುವ ಸಮೂಹವನ್ನು ಪ್ರತಿನಿಧಿಸುವ ನಿಮ್ಮ ಬಳಿ ಪ್ರಶ್ನೆ ಹಾಗೂ ಉತ್ತರ ಎರಡೂ ಇದೆ. ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ರಾಜಕೀಯದಲ್ಲಿ ವೈರತ್ವ ಎನ್ನುವುದು ಇರುವುದಿಲ್ಲ. ಜತೆಗೆ ರಾಜಕೀಯದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ‘ಸಾಧ್ಯತೆಗಳ ಕಲೆಯೇ ರಾಜಕೀಯ’ ಅದಕ್ಕೆ ನೀವು ಸಾಧ್ಯತೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದರು.

ರಾಜ್ಯದ ಪ್ರತಿ ಬೂತ್ ಹಂತದಲ್ಲೂ ಡಿಜಿಟಲ್ ಯೂಥ್ ಇರಲೇಬೇಕು. ಎಲ್ಲಡೆ ಎಲ್ಲ ಬೂತ್‌ಗಳಲ್ಲೂ ತಲಾ 150 ಉತ್ಸಾಹಿ ಕಾರ್ಯಕರ್ತರ ಪಡೆ ಸೃಷ್ಟಿ ಮಾಡಬೇಕು. ಆಯಾಯ ಬೂತ್‌ನಲ್ಲಿ ಎಷ್ಟು ಮತವನ್ನು ಪಕ್ಷದ ಅಭ್ಯರ್ಥಿಗೆ ಕೊಡಿಸಬಹುದು ಎನ್ನುವುದು ಮುಖ್ಯ. ತಂತ್ರಜ್ಞಾನ ಎಲ್ಲರ ಮನೆ ಬಾಗಿಲಿನಲ್ಲಿದೆ. ಅದನ್ನು ಬಳಸಿಕೊಳ್ಳಿ. ಬೇರೆ ಪಕ್ಷದವರನ್ನು ಸದಸ್ಯರಾಗಿ ಮಾಡುವುದಷ್ಟೇ ಅಲ್ಲ. ಅವರಲ್ಲಿ ಕಾಂಗ್ರೆಸ್ಸಿಗರೆಂಬ ಭಾವನೆ ತರಬೇಕು. ಅದು ಬಿಜೆಪಿ, ಜೆಡಿಎಸ್ ಅವರಿಗೂ ಗೊತ್ತಾಗಬೇಕು. ನಿಮ್ಮ ನಾಯಕತ್ವ ಅಲ್ಲಿಂದಲೇ ಶುರುವಾಗುತ್ತದೆ ಎಂದು ಸಲಹೆ ನೀಡಿದರು.

ಜನಪರವಾದ ಒಂದೇ ಒಂದು ಯೋಜನೆಗಳನ್ನು ಬಿಜೆಪಿ ತಂದಿಲ್ಲ. 371 ಜೆ ಯೋಜನೆ ನಮ್ಮ ಹೆಗ್ಗಳಿಕೆ. ಅಂದು ಅಡ್ವಾನಿಯವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರು. ಅಂಗನವಾಡಿ ಯೋಜನೆ ತಂದಿದ್ದು ಇಂದಿರಾಗಾಂಧಿ ಅವರು, ಆಶಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಅವರು. ಸಿಇಟಿ ತಂದಿದ್ದು ವೀರಪ್ಪ ಮೊಯ್ಲಿ ಅವರು, ಬಂಗಾರಪ್ಪ ಅವರು ರೈತರ ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ಯೋಜನೆ ತಂದರು. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದರು.

2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯುವ ಕಾಂಗ್ರೆಸ್ ಪದಾಧಿಕಾರಿಗಳು ದುಡಿಯಬೇಕು. ಅದಕ್ಕಾಗಿ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬೆಂಗಳೂರು, ಮೈಸೂರು ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿದ್ದು, ಎಲ್ಲೆಡೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಬಿಜೆಪಿ ಪಕ್ಷ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಜನರು ಬದುಕಿಗಾಗಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ದೇಶದಲ್ಲಿ ನೂರಾರು ಸಾರ್ವಜನಿಕ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ, ಸರ್ಕಾರಿ ಉದ್ಯೋಗ ಸೃಷ್ಟಿಸಿದೆ. ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಗಾಂಧಿ ಕುಟುಂಬವು ದೇಶಕ್ಕಾಗಿ ಪ್ರಾಣ ಅರ್ಪಿಸಿದೆ. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನವನ್ನು ತ್ಯಾಗಮಾಡಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಇದೀಗ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಬಿಜೆಪಿಗರು ಇದನ್ನು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಕೆ.ಹರೀಶ್‌ಗೌಡ, ರವಿಶಂಕರ್, ದರ್ಶನ್ ಧ್ರುವನಾರಾಯಣ, ಮುಖಂಡರಾದ ವಿ.ಎಸ್.ಉಗ್ರಪ್ಪ, ಕಳಲೆ ಕೇಶವಮೂರ್ತಿ, ನಜ್ಮಾ ನೇರಳೆ, ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net