ಜಾಗತಿಕ ಸಹಕಾರ ಅಗತ್ಯ: ಅಪರಾಧ, ಭಯೋತ್ಪಾದನೆ ನಿಗ್ರಹಿಸಲಿ ಇಂಟರ್​ಪೋಲ್

Interpol
Published on

ಇಂಟರ್​ಪೋಲ್​ನ 90ನೇ ಮಹಾ ಅಧಿವೇಶನ ನವದೆಹಲಿಯಲ್ಲಿ ಮಂಗಳವಾರ ಆರಂಭಗೊಂಡಿದೆ. 25 ವರ್ಷಗಳ ನಂತರ ಭಾರತದಲ್ಲಿ ಇಂತಹ ಅಧಿವೇಶನ ನಡೆಯುತ್ತಿದ್ದು, 195 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲೇ ಇಂಟರ್​ಪೋಲ್ ಅಧಿವೇಶನ ಆಯೋಜಿಸುವ ಭಾರತದ ಪ್ರಸ್ತಾಪಕ್ಕೆ ಬಹುಮತದ ಬೆಂಬಲ ವ್ಯಕ್ತವಾಗಿತ್ತು. ಅಧಿವೇಶನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ವ್ಯವಸ್ಥೆಯ ಅಗತ್ಯ ಹಾಗೂ ಮಹತ್ವವನ್ನು ಸಾರುತ್ತ, ವಿಶ್ವವು ಒಂದು ಉತ್ತಮ ತಾಣವಾಗಲು ಜಾಗತಿಕ ಸಹಕಾರದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಪ್ರಮುಖ ಕೊಡುಗೆ ನೀಡಿದ ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಹೇಳುವ ಮೂಲಕ ಈ ನಿಟ್ಟಿನಲ್ಲಿ ಭಾರತದ ಮೊದಲಿನಿಂದಲೂ ಕಾರ್ಯನಿರತವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇಂಟರ್​ಪೋಲ್ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪೊಲೀಸ್ ವ್ಯವಸ್ಥೆಯಾಗಿದೆ. ಇಂಟರ್​ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಕಮೀಷನ್ ಎಂಬ ಹೆಸರಿನಲ್ಲಿ 1923ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅಪರಾಧ ನಿಯಂತ್ರಣಕ್ಕಾಗಿ ಜಗತ್ತಿನಾದ್ಯಂತ ಪೊಲೀಸ್ ವ್ಯವಸ್ಥೆಯ ನಡುವೆ ಸಹಕಾರ ಏರ್ಪಡಿಸುವುದು ಪ್ರಮುಖ ಕಾರ್ಯವಾಗಿದೆ. ಭಯೋತ್ಪಾದನೆ, ಸೈಬರ್​ಕ್ರೖೆಂ ಮತ್ತು ಸಂಘಟಿತ ಅಪರಾಧ- ಈ ಮೂರು ಅಂತಾರಾಷ್ಟ್ರೀಯ ಅಪರಾಧಗಳ ಮೇಲೆ ಪ್ರಮುಖವಾಗಿ ಗಮನಹರಿಸುತ್ತದೆ. ಇದು ಯಾವುದೇ ದೇಶದಲ್ಲಿ ನೇರವಾಗಿ ಕಾರ್ಯಾಚರಣೆ ಮಾಡುವುದಿಲ್ಲ. ಆಯಾ ದೇಶಗಳ ಪೊಲೀಸ್ ವ್ಯವಸ್ಥೆ ಸಹಕಾರದ ಮೂಲಕವೇ ಕಾರ್ಯನಿರ್ವಹಣೆ ಮಾಡುತ್ತದೆ. ಭಾರತದ ಐಪಿಎಸ್ ಅಧಿಕಾರಿ ಮುನೀಶ್ ಪಾಂಡೆ ಕಳೆದ ನವೆಂಬರ್​ನಲ್ಲಿ ಇಂಟರ್​ಪೋಲ್​ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿರುವುದು ಉಲ್ಲೇಖಾರ್ಹ ಸಂಗತಿ. ಏಷ್ಯಾ ಖಂಡದಿಂದ ಇಬ್ಬರು ಆಯ್ಕೆಯಾಗಲು ಅವಕಾಶವಿದ್ದು, ಇನ್ನೊಂದು ಸ್ಥಾನ ಚೀನಾದ ಪಾಲಾಗಿದೆ.

ಈ ಸಂಸ್ಥೆಯು ರಾಜಕೀಯವಾಗಿ ತಟಸ್ಥ ಧೋರಣೆ ಹೊಂದಿದ್ದರೂ ಕೆಲ ದೇಶಗಳ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತದೆ ಎಂಬ ಆರೋಪಗಳನ್ನು ಎದುರಿಸಿದೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೇಕಾದ ಅಪರಾಧಗಳ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಹೊರಡಿಸುವುದು ಇಂಟರ್​ಪೋಲ್​ನ ಮಹತ್ವದ ಕಾರ್ಯವಾಗಿದೆ. ಇಂತಹ ನೋಟಿಸ್ ಹೊರಡಿಸುವಲ್ಲಿ ಅದು ತಾರತಮ್ಯ ತೋರುತ್ತದೆ ಎಂಬ ಆಪಾದನೆ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13,570 ಕೋಟಿ ರೂಪಾಯಿ ವಂಚಿಸಿರುವ ಮೆಹುಲ್ ಚೊಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಾಕಷ್ಟು ವಿಳಂಬನೀತಿಯನ್ನು ಇದು ಅನುಸರಿಸಿದೆ. ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಇಂಗ್ಲೆಂಡ್​ಗೆ ಪರಾರಿಯಾಗಿರುವ ವಿಜಯ ಮಲ್ಯ ವಿರುದ್ಧವೂ ಇಂತಹ ನೋಟಿಸ್ ಜಾರಿಗೊಳಿಸಿಲ್ಲ.

ಇನ್ನು ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಅದರ ಕಾರ್ಯಸಾಧನೆ ಹೇಳಿಕೊಳ್ಳುವಂತೇನೂ ಇಲ್ಲ. ‘ಭಯೋತ್ಪಾದನೆ, ಭ್ರಷ್ಟಾಚಾರ, ಮಾದಕವಸ್ತು ಕಳ್ಳಸಾಗಣೆ, ಸಂಘಟಿತ ಅಪರಾಧ ಮುಂತಾದ ಜಾಗತಿಕವಾಗಿ ಹಾನಿಕಾರಕವಾದ ಅನೇಕ ಬೆದರಿಕೆಗಳನ್ನು ಜಗತ್ತು ಎದುರಿಸುತ್ತಿದೆ. ಬೆದರಿಕೆಗಳು ಜಾಗತಿಕವಾಗಿದ್ದಾಗ ಪ್ರತಿಕ್ರಿಯೆಯು ಕೇವಲ ಸ್ಥಳೀಯವಾಗಿರಲು ಸಾಧ್ಯವಿಲ್ಲ’ ಎಂದೂ ಮೋದಿ ಅರ್ಥಪೂರ್ಣವಾಗಿಯೇ ಹೇಳಿದ್ದು, ಇಂಟರ್​ಪೋಲ್ ಆಡಳಿತಗಾರರು ಇದನ್ನು ಮನವರಿಕೆ ಮಾಡಿಕೊಂಡು ಕಾರ್ಯನಿರ್ವಹಿಸಿದಲ್ಲಿ, ಜಾಗತಿಕ ಅಪರಾಧಗಳಿಗೆ ಕೆಲಮಟ್ಟಿನ ನಿಯಂತ್ರಣ ಸಾಧ್ಯವಾದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net