ಜಲಾವೃತಗೊಂಡಿದ್ದ ಹೆಡತಲೆ ಗ್ರಾಮ ಸಹಜಸ್ಥಿತಿಗೆ

06NGD1
Published on

ನಂಜನಗೂಡು: ಹಳೇಪುರ ಕೆರೆ ಕೋಡಿ ಬಿದ್ದ ನೀರು ಸೇರಿದಂತೆ ಧಾರಾಕಾರ ಮಳೆಗೆ ಜಲಾವೃತಗೊಂಡಿದ್ದ ತಾಲೂಕಿನ ಹೆಡತಲೆ ಗ್ರಾಮದ ಬಡಾವಣೆ ಮಂಗಳವಾರ ಸಹಜ ಸ್ಥಿತಿಗೆ ಮರಳಿದ್ದು, ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.


400ಕ್ಕೂ ಹೆಚ್ಚು ನಿವಾಸಿಗಳು ವಾಸವಿರುವ ಬಡಾವಣೆಯ 78 ಮನೆಗಳು ಸೋಮವಾರ ಜಲಾವೃತಗೊಂಡು ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ತಾಲೂಕು ಆಡಳಿತ ಹೆಡತಲೆ ಮುಖ್ಯ ರಸ್ತೆಯನ್ನು ಎರಡು ಕಡೆ ಅಗೆದು ಪ್ರವಾಹ ನೀರು ತಗ್ಗು ಪ್ರದೇಶದ ಮೂಲಕ ನರಸಾಂಬುಧಿ ಕೆರೆಗೆ ಹರಿದು ಹೋಗುವಂತೆ ಮಾಡುವ ಮೂಲಕ ಸೋಮವಾರ ಸಂಜೆ ವೇಳೆಗೆ ಪ್ರವಾಹ ನೀರು ತಗ್ಗಿದ್ದರಿಂದ ಮಂಗಳವಾರ ಬಡಾವಣೆಯು ಸಹಜ ಸ್ಥಿತಿಗೆ ಮರಳಿತು. ಆದರೆ ಪ್ರವಾಹ ನೀರು ಮನೆಗಳಿಗೆ ನುಗ್ಗಿದ್ದರಿಂದ ಗೃಹೋಪಯೋಗಿ ವಸ್ತುಗಳು ಹಾಗೂ ದವಸ-ಧಾನ್ಯಗಳು ಹಾಳಾಗಿದ್ದು ನಿವಾಸಿಗಳನ್ನು ಚಿಂತೆಗೀಡು ಮಾಡಿದೆ.


ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನಿವಾಸಿಗಳು ಮಂಗಳವಾರ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಈಗಾಗಲೇ ಶಾಸಕ ಬಿ.ಹರ್ಷವರ್ಧನ್ ತಾಲೂಕು ಆಡಳಿತದಿಂದ 78 ಮನೆಗಳ ನಿವಾಸಿಗಳಿಗೆ ತಲಾ 10 ಸಾವಿರ ರೂ.ನೆರವು ಕೊಡಿಸಿರುವುದು ನಿವಾಸಿಗಳು ನಿರಾಳರಾಗಿದ್ದಾರೆ. ಜಾನುವಾರುಗಳಿಗಾಗಿ ಸಂಗ್ರಹಿಸಿದ್ದ ಮೇವು ನೆರೆಗೆ ಕೊಚ್ಚಿ ಹೋಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಕೊಟ್ಟಿಗೆಗಳು ನೀರಿನ ರಭಸಕ್ಕೆ ನೆಲಸಮವಾಗಿರುವುದರಿಂದ ಅವುಗಳನ್ನು ಮರಳಿ ಕಟ್ಟುವ ಕಾಯಕದಲ್ಲಿ ರೈತರು ತೊಡಗಿದ್ದಾರೆ. ಮಳೆಯ ನೀರಿಗೆ ಕೆಲ ಮನೆಗಳ ಗೋಡೆಗಳು ಶಿಥಿಲಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net