

ನೀರನ್ನು ಸದ್ಬಳಕೆ ಮಾಡಿಕೊಳ್ಳುವ, ಜಲ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯಪ್ರವೃತರಾಗಬೇಕು ಎಂಬುದೂ ಸೇರಿದಂತೆ ಜಲಸಂಪನ್ಮೂಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ವಾಟರ್ ಆಡಿಟಿಂಗ್ ಮಾಡಬೇಕಾದ ಅಗತ್ಯವಿದೆ ಎಂದು ಪಿಸಿಸಿಎಫ್ (ಇಡಬ್ಲುೃಪಿಆರ್‌ಟಿ ಆ್ಯಂಡ್ ಸಿಸಿ) ಬಿ.ಪಿ.ರವಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಕರಾಮುವಿವಿಯ ಪರಿಸರ ವಿಜ್ಞಾನ ಸಂಶೋಧನಾ ಮತ್ತು ಅಧ್ಯಯನ ವಿಭಾಗ ಹಾಗೂ ಪ್ರೊ.ಎಸ್.ಗೋಪಾಲ್ ಮೆಮೊರಿಯಲ್ ಫೌಂಡೇಷನ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಹಸಿರು ಭವಿಷ್ಯದ ನಿರ್ಮಾಣಕ್ಕಾಗಿ ಪರಿಸರ ಆಡಿಟಿಂಗ್’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ನೀರಿನ ಸಂರಕ್ಷಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಹೀಗಾಗಿ ಅಕಾಲಿಕವಾಗಿ ಮಳೆ ಬೀಳುತ್ತದೆ, ಪ್ರವಾಹ ಉಂಟಾಗುತ್ತಿದೆ. ಮಳೆ ಬೀಳುವ ಋತುಮಾನದ ಸಮಯದಲ್ಲಿ ತೀವ್ರ ತಾಪಮಾನ ಏರಿಕೆಯಾಗುತ್ತದೆ, ಬರದ ಸ್ವರೂಪ ಕಾಣಿಸಿಕೊಳ್ಳುತ್ತಿದೆ. ರಾಜಸ್ಥಾನ ಬಿಟ್ಟರೆ ಒಣ ಭೂಮಿ ಹೊಂದಿರುವ ಎರಡನೇ ಅತಿದೊಡ್ಡ ರಾಜ್ಯ ಕರ್ನಾಟಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯನ್ನು ಸುಸ್ಥಿರಗೊಳಿಸುವ ದೃಷ್ಟಿಯಿಂದ ವಾಟರ್ ಆಡಿಟಿಂಗ್ ಅತ್ಯವಶ್ಯಕವಾಗಿದೆ ಎಂದರು.
ಗಿಡ, ಮರಗಳು ವಾತಾವರಣದ ಇಂಗಾಲವನ್ನು ಹೀರಿಕೊಂಡು ಮಾನವನಿಗೆ ಅತ್ಯವಶಕ್ಯವಾಗಿ ಬೇಕಾಗಿರುವ ಆಮ್ಲಜನಕ ನೀಡುತ್ತವೆ. ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷ್ಮಾಣು ಜೀವಿಗಳು ಮರಗಳಲ್ಲಿ ಪರಾವಲಂಬಿಗಳಾಗಿ ಜೀವಿಸುತ್ತ ಇರುತ್ತವೆ. ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಮರಗಳು ಅವಶ್ಯ. ಜತೆಗೆ ಮನುಷ್ಯ ಜೀವಿಸಲು ಗಾಳಿ, ಮಳೆ, ಆಹಾರ, ನೀರು ಅತ್ಯಂತ ಅವಶ್ಯ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.