

ಎನ್.ಆರ್.ಪುರ:ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಜಲಮೂಲಗಳ ನೀರನ್ನು ವರ್ಷಕ್ಕೆ ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಬೇಕೆಂದು ಜಿಲ್ಲಾ ಯೋಜನಾ ವ್ಯವಸ್ಥಾಪಕ ಮೋಹನ್‌ಕುಮಾರ್ ಹೇಳಿದರು.
ಸೋಮವಾರ ತಾಪಂ ಸಾಮರ್ಥ್ಯಸೌಧದಲ್ಲಿ ಏರ್ಪಡಿಸಿದ್ದ ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ನೀರನ್ನು ಗ್ರಾಮಸ್ಥರಿಗೆ ಸರಬರಾಜು ಮಾಡುವುದು ಮುಖ್ಯವಲ್ಲ. ಆದರೆ ಅದು ಗುಣಮಟ್ಟದ್ದಾಗಿರಬೇಕು. ಕಲುಷಿತ ನೀರು ಸೇವಿಸಿ ಸಾವುಗಳು ಸಂಭವಿಸಿದ್ದು ಇದಕ್ಕೆ ನಮ್ಮ ನಿರ್ಲಕ್ಷ್ಯವೇ ಕಾರಣ ಎಂದರು.
ಗ್ರಾಮದಲ್ಲಿರುವ ಜಲಮೂಲಗಳು ಕಲುಷಿತವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ಅಭಿಯಾನ ನಮ್ಮ ಜಿಲ್ಲೆಯಲ್ಲೇ ಪ್ರಥಮವಾಗಿ ನಡೆಸಲಾಗುತ್ತಿದೆ. ಈ ಅಭಿಯಾನದ ಮೂಲಕ ಜನರಲ್ಲಿ ಕುಡಿಯುವ ನೀರಿನ ಸುರಕ್ಷತೆ, ಕಲುಷಿತ ನೀರು ಸೇವಿಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಆಗಾಗ ಸ್ವಚ್ಛಗೊಳಿಸುವುದು ಆ ಗ್ರಾಮದ ನೀರುಗಂಟಿ ಕರ್ತವ್ಯ. ಯಾರು ಟ್ಯಾಂಕ್‌ನ್ನು ಸ್ವಚ್ಛಗೊಳಿಸಿದರು, ಯಾವಾಗ ಸ್ವಚ್ಛಗೊಳಿಸಿದರು ಎಂಬ ಬಗ್ಗೆ ಮಾಹಿತಿಯನ್ನು ನಮೂದು ಮಾಡಿಕೊಳ್ಳಬೇಕು ಎಂದು ಹೇಳಿದರು.
ಜೆಜೆಎಂ ತರಬೇತಿ ತಂಡದ ಮುಖ್ಯಸ್ಥ ಜಲಾಧರ್ ಮಾತನಾಡಿ, ಕಲುಷಿತ ನೀರಿನ ಸೇವನೆಯಿಂದಾಗಿ ಬಹಳಷ್ಟು ಅನಾಹುತಗಳು ಸಂಭವಿಸುತ್ತವೆ. ಕಲುಷಿತ ನೀರಿನ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕಲುಷಿತ ನೀರಿನ ನಿಯಂತ್ರಣ ಬಗ್ಗೆ ಅರಿವನ್ನು ಮೂಡಿಸಲು ಅಭಿಯಾನದ ಮೂಲಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಗ್ರಾಪಂಗಳಿಗೂ ಕುಡಿಯುವ ನೀರಿನ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು. ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ತರಬೇತಿ ನೀಡಲಾಯಿತು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಎ.ಸಂತೋಷ್‌ಕುಮಾರ್, ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒ ಹಾಗೂ ನೀರು ಗಂಟಿಗಳು ಇದ್ದರು.