

ಎನ್.ಆರ್.ಪುರ: ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಎನ್.ಆರ್.ಪುರ ತಾಲೂಕು ಯೋಜನಾಧಿಕಾರಿ ನಿರಂಜನ್ ತಿಳಿಸಿದರು.
ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೆಟ್ಟಿಕೊಪ್ಪ ವಲಯ ವ್ಯಾಪ್ತಿಯ ಕೆ.ಕಣಬೂರಿನ ಜಲಕಂಠೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರದಿಂದ 1.50 ಲಕ್ಷ ರೂ. ಸಹಾಯಧನದ ಚೆಕ್‌ಅನ್ನು ದೇವಸ್ಥಾನದ ಸಮಿತಿ ಅಧ್ಯಕ್ಷ ದಿವಾಕರ್, ಕಾರ್ಯದರ್ಶಿ ಉಮೇಶ್‌ಗೆ ಹಸ್ತಾಂತರಿಸಿ ಮಾತನಾಡಿ, ಈ ಭಾಗದ ಜಲಕಂಠೇಶ್ವರ ಸಮಿತಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಾಯ ಕೇಳಿದ್ದರಿಂದ 1.50 ಲಕ್ಷ ರೂ. ಚೆಕ್‌ನ್ನು ದೇವಸ್ಥಾನಕ್ಕೆ ಕಳಿಸಿದ್ದಾರೆ. ದಾನಿಗಳು ಹಾಗೂ ಗ್ರಾಮಸ್ಥರ ಸಹಾಯ ಪಡೆದು ಶೀಘ್ರ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಮುಗಿಸುವಂತಾಗಲಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಕಾರ್ಯದರ್ಶಿ ಪುಟ್ಟಸ್ವಾಮಿ, ಕೋಶಾಧಿಕಾರಿ ಚಂದ್ರ, ವಲಯ ಮೇಲ್ವಿಚಾರಕ ಸತೀಶ್, ಸೇವಾ ಪ್ರತಿನಿಧಿ ಪಲ್ಲವಿ, ದೇವಸ್ಥಾನದ ಸಮಿತಿ ಸದಸ್ಯರಾದ ಸಾಧನಾ, ಉಮೇಶ್, ಸಿರಿ, ಸತೀಶ್, ಕಿರಣ, ಪ್ರಭಾಕರ, ದಿವಾಕರ, ಮಂಜುನಾಥ್, ಗ್ರಾಮಸ್ಥರಾದ ನಾಗರಾಜು ಮತ್ತಿತರರಿದ್ದರು.