ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್ ಕೋಡ್

Crime Logo
Published on

ಬೆಂಗಳೂರು: ಪೊಲೀಸರು ಜಪ್ತಿ ಮಾಡುವ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ತಾಂತ್ರಿಕತೆಯ ನೆರವಿನಿಂದ ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಸ್ತುಗಳು ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಕೆಲ ಲೋಪದೋಷಗಳು ಕಂಡು ಬಂದಿದ್ದವು. ಇದನ್ನು ಸರಿಪಡಿಸುವ ಉದ್ದೇಶದಿಂದ ತಾಂತ್ರಿಕ ಪರಿಹಾರ ಕಂಡುಕೊಳ್ಳಲಾಗಿದೆ. ಈ ಜಪ್ತಿ ವಸ್ತುಗಳು ಸಮಪರ್ಕ ನಿರ್ವಹಣೆ ಸಂಬಂಧ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಜಪ್ತಿ ವಸ್ತುವಿನ ಮೇಲೆ ಕ್ಯೂ ಆರ್ ಕೋಡ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಪ್ರಕರಣ, ವಸ್ತು, ಜಪ್ತಿ ಸ್ಥಳ, ಜಪ್ತಿ ಮಾಡಿದ ವ್ಯಕ್ತಿ, ಪಂಚರ ಮಾಹಿತಿ ಸೇರಿದಂತೆ ಇಡೀ ಪ್ರಕರಣದ ವಿವರಗಳು ಒಂದೇ ಕಡೆ ಸಿಗಲಿದೆ. ಸದ್ಯಕ್ಕೆ ನಗರದ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಸಿಸಿಬಿಯ ಎಲ್ಲಾ ವಿಭಾಗಗಳಲ್ಲಿ ಈ ಕ್ಯೂಆರ್ ಕೋಡ್ ಪರಿಚಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆಲ ಸಂದರ್ಭಗಳಲ್ಲಿ ಈ ಜಪ್ತಿ ವಸ್ತುಗಳು ಚಲ್ಲಾಪಿಲ್ಲಿಯಾಗುವುದರಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗ ವೇಳೆ ಸಮಸ್ಯೆಯಾಗುತ್ತದೆ. ಅಂದರೆ, ಸರಿಯಾದ ಸಮಯಕ್ಕೆ ಆ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಆಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. ಈ ಹಿಂದೆ ಕೆಲ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದ ಜಪ್ತಿ ವಸ್ತುಗಳನ್ನು ಹುಡುಕಿ ಅಪ್ಡೇಟ್ ಮಾಡಲಾಗಿದೆ ಎಂದರು.

ಅಧಿಕಾರಿಗಳ ವಿರುದ್ಧ ಪ್ರಕರಣ:

ಈ ಹಿಂದೆ ಜಪ್ತಿ ಮಾಡಿದ ವಸ್ತುಗಳನ್ನು ಸರಿಯಾಗಿ ನಿರ್ವಹಿಸದೆ ಕಳೆದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉಂಟಾಗದಂತೆ ಈ ಕ್ಯೂ ಆರ್ ಕೋಡ್ ಪರಿಚಯಿಸಲಾಗಿದೆ. ಇದರಿಂದ ಜಪ್ತಿ ಮಾಡಿದ ವಸ್ತುಗಳು ಸಮಪರ್ಕ ನಿರ್ವಹಣೆ ಸಾಧ್ಯವಾಗಲಿದೆ ಎಂದು ದಯಾನಂದ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net