

ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿ ಹಾಕಿದ್ದ ಜನಿವಾರ ತೆಗೆಸಿದವರ ಮೇಲೆ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಿವಾರ ಹಾಗೂ ಹಿಜಾಬ್ ಘಟನೆಯಲ್ಲಿ ನಮ್ಮ ನಿಲುವು ಒಂದೇ. ನಾವು ಈಗಾಗಲೇ ಜನಿವಾರ ತೆಗೆಸಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದೇವೆ. ಜನಿವಾರ ತೆಗೆಸಿದ್ದನ್ನು ನಾವು ಖಂಡಿಸಿದ್ದೇವೆ. ನೊಂದ ವಿದ್ಯಾರ್ಥಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಜಾತಿಗಣತಿ ವಿಚಾರವನ್ನು ಮುಂದಕ್ಕೆ ತಂದಿದ್ದಾರೆ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಿಎಂ ಕುರ್ಚಿಗೆ ಯಾವುದೇ ಅಪಾಯ ಬಂದಿಲ್ಲ. ಅಪಾಯವೇ ಇಲ್ಲ ಅಂದ ಮೇಲೆ ಯಾಕೆ ಈ ಮಾತು. ಸಿದ್ದರಾಮಯ್ಯನವರ ಹಿಂದೆ ಹೈಕಮಾಂಡ್ ಇದೆ. ಹಾಗಾಗಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು. ಕೊಟ್ಟ ಮಾತಿನಂತೆ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಮಂಡನೆ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಕೊಟ್ಟ ಭರವಸೆ ಈಡೇರಿಸುವುದು ನಮ್ಮ ಕರ್ತವ್ಯ. ಜಾತಿಗಣತಿ ವರದಿ ಬಿಡುಗಡೆಯಿಂದ ಎಲ್ಲರಿಗೂ ನ್ಯಾಯ ಸಿಗುತ್ತದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಿಗೆ ಸಿಗುತ್ತದೆ ಎಂದು ಹೇಳಿದರು.
ಮರು ಜಾತಿಗಣತಿ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಡೆದಿರುವ ಜಾತಿಗಣತಿಯೇ ವೈಜ್ಞಾನಿಕವಾಗಿದೆ. ಸುಖಾಸಮ್ಮನೆ ವಿರೋಧ ಮಾಡುವುದು ಸರಿಯಲ್ಲ. ಪೂರ್ವಾಗ್ರಹ ಪೀಡಿತರಾಗಿ ಕೆಲವರು ವಿರೋಧ ಮಾಡುತ್ತಿದ್ದಾರೆ. ಯಾರೂ ಭಯಪಡುವ ಅಗತ್ಯ ಇಲ್ಲ. ಜಾತಿಗಣತಿಯಿಂದ ಕೆಲವರು ನಮ್ಮ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ 2011-12ರ ಜಾತಿಗಣತಿ ಪ್ರಕಾರ ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಜನಸಂಖ್ಯೆಗೆ ಹೋಲಿಸಿದರೆ ಸರಿಯಾಗಿದೆ. ಮರುಗಣತಿ ಮಾಡುವುದನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಬೇಕು. ಈ ಬಗ್ಗೆ ಯಾರೂ ಕೂಡ ಭಯಪಡುವ ಅಗತ್ಯ ಇಲ್ಲ ಎಂದರು.
ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ರೀತಿಯ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜಾತಿ ಗಣತಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದರು.
ಸಮೀಕ್ಷೆಯಲ್ಲಿ ಜಾತಿ ಗಣತಿ ಒಂದು ಭಾಗ ಮಾತ್ರವಾಗಿದ್ದು, ಪ್ರತಿ ಜಾತಿಗಳ ಸಂಖ್ಯೆ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಸ್ಥಿತಿಗತಿ ತಿಳಿಯಲು ಇದರಿಂದ ಸಾಧ್ಯವಾಗಲಿದೆ. ಇದೆಲ್ಲವನ್ನು ಮಾಡಿ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹಿಂದುಳಿದ ವರ್ಗಕ್ಕೆ ಲಿಂಗಾಯತರು, ಒಕ್ಕಲಿಗರು ಕೂಡ ಸೇರಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರದಲ್ಲಿ 3ಎ, 3ಬಿ ಗೆ ಶೇಕಡ 2 ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ, ಈ ಆಯೋಗ ಶೇ. 3ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ಶೇ.32ರಷ್ಟು ಇದ್ದ ಒಬಿಸಿ ಮೀಸಲಾತಿಯನ್ನು 51ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ. ಹೆಚ್ಚಾಗುವ ಶೇ.19ರಷ್ಟು ಮೀಸಲಾತಿಯಲ್ಲಿ ಶೇ.6ರಷ್ಟು ಲಿಂಗಾಯತ, ಒಕ್ಕಲಿಗರಿಗೆ ಪಾಲು ಸಿಗಲಿದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಲಾಗುತ್ತಿದೆ. ಅವರಿಗೆ ಅನುಕೂಲ ಆಗುತ್ತಿದ್ದರೂ ಕೂಡ ಪೂರ್ವಾಗ್ರಹ ಪೀಡಿತರಾಗಿ ಆರೋಪ ಮಾಡುತ್ತಿದ್ದಾರೆ ಎಂದರು.