ಜನವರಿಯಿಂದ ಎರಡನೇ ಹಂತದ ಯಾತ್ರೆ. ಕುಮಾರಸ್ವಾಮಿ ಮಾಹಿತಿ, ಮಾಲೂರು ತಾಲೂಕಿನಲ್ಲಿ 3ನೇ ದಿನದ ಜೆಡಿಎಸ್​ ಪಂಚರತ್ನ ರಥಯಾತ್ರೆ

20-kolar-2 hdk
ಮಾಲೂರು ತಾಲೂಕು ಕೆಂಪಸಂದ್ರದಲ್ಲಿ ಮಹಿಳೆಯರು ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿದರು.
Published on

ಕೋಲಾರ: ಮೂರನೇ ದಿನದ ಜೆಡಿಎಸ್​ ಪಂಚರತ್ನ ರಥಯಾತ್ರೆ ಭಾನುವಾರ ಬೆಳಗ್ಗೆ 10 ಗಂಟೆಗೆ ಮಾಲೂರು ತಾಲೂಕಿನ ಕೆಂಪಸಂದ್ರದಿಂದ ಆರಂಭಗೊಂಡಿತು.

2ನೇ ದಿನವಾರ ಶನಿವಾರ ರಾತ್ರಿ ಬಂಗಾರಪೇಟೆ ತಾಲೂಕಿನ ಮಾಗೇರಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಕೆಂಪಸಂದ್ರಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.

ಮೋಡ ಮುಸುಕಿದ ವಾತಾವರಣ, ಮೈಕೊರೆವ ಚಳಿಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಕಾರ್ಯಕರ್ತರು ಜೆಡಿಎಸ್​ ಪರ ಜೈಕಾರ ಹಾಕಿದರು. ಬಳಿಕ ಕುಮಾರಸ್ವಾಮಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ದು, ಕ್ರೇನ್​ ಮೂಲಕ ಬೃಹತ್​ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ಜನರು ತೋರುತ್ತಿರುವ ಅಭಿಮಾನ ಮುಂದಿನ ನೂರು ದಿನಗಳ ಹೋರಾಟಕ್ಕೆ ಉತ್ಸಾಹ ತುಂಬಿದೆ ಎಂದು ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಜ.3ರಿಂದ ಮಾ.15ರವರೆಗೆ 2ನೇ ಹಂತದ ಯಾತ್ರೆ ನಡೆಯಲಿದೆ. ಜನರಿಗೆ ಪಂಚರತ್ನ ಯೋಜನೆಗಳ ಅರಿವಾಗುತ್ತಿದೆ. ಇವು ಜಾರಿಯಾದರೆ ಸ್ವರ್ಗದ ವಾತಾವರಣ ನಿಮಾರ್ಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ನನಗೆ ಶಾರೀರಿಕ, ಮಾನಸಿಕವಾಗಿ ಮತ್ತಷ್ಟು ಸದೃಢಗೊಳಿಸಿದೆ ಎಂದು ಎಚ್​ಡಿಕೆ ಹೇಳಿದರು.

ಬಳಿಕ ಹುಣಸಿಕೋಟೆಯಲ್ಲಿ ರೋಡ್​ ಶೋ ನಡೆಸಿದ ಕುಮಾರಸ್ವಾಮಿ, ಟೇಕಲ್​, ತೊರಲಕ್ಕಿ, ದಿನ್ನಹಳ್ಳಿ ಮಾರ್ಗವಾಗಿ ಮಾಸ್ತಿಗೆ ತೆರಳಿದರು.

ಹೆಬ್ಬೆಟ್ಟಿನ ಆಯೋಗವಾಗುವುದು ಬೇಡ

ಕೋಲಾರ: ಮತದಾರರ ದತ್ತಾಂಶ ಕಳವಿನ ಆರೋಪ ದೊಡ್ಡ ಹಗರಣವಾಗುವ ರೀತಿ ಕಾಣುತ್ತಿದ್ದು, ತಪ್ಪಿತಸ್ಥರ ಮೇಲೆ ಚುನಾವಣಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಬಂಗಾರಪೇಟೆ ಕ್ಷೇತ್ರದ ಮಾಗೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಯೋಗ ಕ್ರಮ ಕೈಗೊಳ್ಳದಿದ್ದರೆ "ಹೆಬ್ಬೆಟ್ಟಿನ ಆಯೋಗ' ಎಂಬ ಅಪಖ್ಯಾತಿಗೆ ಒಳಗಾಗಬೇಕಾಗುತ್ತದೆ ಎಂದರು.

ಮತದಾರರ ಹೆಸರನ್ನು ಪಟ್ಟಿಯಲ್ಲಿ ಕೈ ಬಿಟ್ಟ ವಿಚಾರದ ಬಗ್ಗೆ ಗಮನಹರಿಸಿರಲಿಲ್ಲ. ವಿರೋಧ ಪಕ್ಷಗಳಿಗೆ ಮತ ಬರುವ ದತ್ತಾಂಶ ಸಂಗ್ರಹ ಮಾಡಿದ್ದಾರೆ ಎಂಬ ಆರೋಪವಿದೆ. ಮತದಾರರನ್ನು ಹಿಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಿದ್ದೀರಿ, ಈಗ ಯಾರಿಗೆ ಹಾಕುತ್ತೀರಿ ಎಂದೆಲ್ಲಾ ಕೇಳಿದ್ದಾರೆ ಎಂಬ ಆರೋಪವಿದೆ. ಬಿಜೆಪಿಯವರು ಅಧಿಕಾರಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅಚ್ಚರಿಯಾಗುತ್ತದೆ ಎಂದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನೂ ವೋಟರ್​ ಐಡಿ ಹಗರಣ ಆರೋಪಿತರೇ ತೆಗೆದಿದ್ದು, ಇಂತಹವರಿಗೆ ಜನ ಪಾಠ ಕಲಿಸಬೇಕಿದೆ. ಬಿಜೆಪಿಗೆ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಸಲು ಇಷ್ಟವಿಲ್ಲ. ಜನ ಬೆಂಬಲವಿಲ್ಲ ಎಂಬುದನ್ನು ಅರಿತು, ತಾಪಂ, ಜಿಪಂ, ಬಿಬಿಎಂಪಿ ಚುನಾವಣೆಗಳಿಂದ ವಿಮುಖರಾಗಿದ್ದಾರೆ ಎಂದರು.

ಇಂದಿನ ಯಾತ್ರೆ

ನ.21ರಂದು 10ಕ್ಕೆ ಮಾಲೂರು ಕ್ಷೇತ್ರದ ಶಿವಾರಪಟ್ಟಣದಿಂದ ತಿರುಮಲಕೊಪ್ಪಕ್ಕೆ ಆಗಮಿಸುತ್ತಾರೆ.

ಬಳಿಕ 10.10ಕ್ಕೆ ವಕ್ಕಲೇರಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 12.35ಕ್ಕೆ ಕೋನೇಪುರ, ಕೊರಗೊಂಡಹಳ್ಳಿ, ರಾತ್ರಿ 7ಕ್ಕೆ ಬೆಳಮಾರನಹಳ್ಳಿ, 7.45 ಕ್ಕೆ ವೇಮಗಲ್​ನಲ್ಲಿ ಸಾರ್ವಜನಿಕ ಸಭೆ,

ರಾತ್ರಿ 10.35ಕ್ಕೆ ಕ್ಯಾಲನೂರಿನಲ್ಲಿ ಸಾರ್ವಜನಿಕ ಸಭೆ, ನಂತರ ಗ್ರಾಮ ವಾಸ್ತವ್ಯ.

ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ

ಮಾಲೂರು: ಜೆಡಿಎಸ್​ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಘೋಷಿಸಿದರು.

ಮಾಸ್ತಿ ಗ್ರಾಮದಲ್ಲಿ ಮಾತನಾಡಿ, 2018ರಲ್ಲಿ ಜೆಡಿಎಸ್​ ಬಹುಮತ ಪಡೆದು ಸರ್ಕಾರ ರಚಿಸಿದ್ದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವ ಉದ್ದೇಶವಿತ್ತು. ಆಗ ಮೈತ್ರಿ ಸರ್ಕಾರದಲ್ಲಿ ರೈತರ 25 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದೆವು. ಅದಾದ ಬಳಿಕ ಸ್ತ್ರೀಶಕ್ತಿ ಸಂಘಗಳ 1 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ತೀಮಾರ್ನಿಸಿದ್ದೆ. ಅಷ್ಟರಲ್ಲಿ ಸರ್ಕಾರವನ್ನು ಕೆಡವಿದ್ದರಿಂದ ಸಾಲಮನ್ನಾ ಮಾಡಲಾಗಲಿಲ್ಲ ಎಂದರು.

ಮಾಲೂರು ತಾಲೂಕಿಗೆ 220 ಕೋಟಿ ಅನುದಾನ

ಕಾಂಗ್ರೆಸ್​&ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 220 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದರು.

ಮಾಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಜಿ.ಇ. ರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದರು.

ಮಾಲೂರು ಅಭ್ಯರ್ಥಿ ಜಿ.ಇ.ರಾಮೇಗೌಡ, ಎಂಎಲ್ಸಿ ಇಂಚರಾ ಗೋವಿಂದರಾಜು, ಭೋಜೇಗೌಡ, ವಿಧಾನಪರಿಷತ್​ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ರಾಜ್ಯ ಜೆಡಿಎಸ್​ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂದ್ರಶೇಖರ್​ಗೌಡ, ಕಾರ್ಯದರ್ಶಿಗಳಾದ ಜಯಣ್ಣ, ಜೆಡಿಎಸ್​ ತಾಲೂಕು ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ಮುಖಂಡರಾದ ಚಂದ್ರೇಗೌಡ, ಎಂ.ಕೆ. ಆನಂದ್​ಕುಮಾರ್​, ಜಿಪಂ ಮಾಜಿ ಸದಸ್ಯ ಎಚ್​.ವಿ.ಶ್ರೀನಿವಾಸ್​, ಮುಖಂಡರಾದ ಡಾ. ರಮೇಶ್​, ರಾಮಸ್ವಾಮಿರೆಡ್ಡಿ, ಸಂಪತ್​ಕುಮಾರ್​, ವಕೀಲ ಆನಂದ್​, ಟೇಕಲ್​ ಆಂಜನಪ್ಪ, ಯಲುವಗುಳಿ ಶ್ರೀನಿವಾಸ್​, ಬನಹಳ್ಳಿ ನಾಗರಾಜ್​, ಸಫಲ್​ ಮಂಜು, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್​, ತಾಪಂ ಮಾಜಿ ಅಧ್ಯಕ್ಷೆ ತ್ರಿವರ್ಣರವಿ ಇತರರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಟೇಕಲ್​ ಮಾಸ್ತಿ ಮಾರ್ಗದಲ್ಲಿ ರೋಡ್​ ಶೋನಲ್ಲಿ ಭಾಗಿಯಾಗಿದ್ದರು.

ಅಂಗವಿಕಲರ ಪಿಂಚಣಿ, ಬಸ್​ ಸೌಕರ್ಯಕ್ಕೆ ಮನವಿ

ಬಂಗಾರಪೇಟೆ ಗ್ರಾಮಾಂತರ: ಶನಿವಾರ ತಡರಾತ್ರಿ ಮಾಗೇರಿಗೆ ಆಗಮಿಸಿದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಆರತಿ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು. ರಾತ್ರಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಗ್ರಾಮದಲ್ಲಿ ವಾಸ್ತವ್ಯ ಮಾಡಿದರು. ತಡರಾತ್ರಿವರೆಗೆ ಗ್ರಾಮಸ್ಥರ ಜತೆಗೆ ಚರ್ಚೆಗೆ ಇಳಿದರು.

ಈ ವೇಳೆ ಬಂಗಾರಪೇಟೆಯ ಇಸ್ಮಾಯಿಲ್​ ಎಂಬುವರು ನಾನು ಮತ್ತು ಮಗ ಅಂಗವಿಕಲರಾಗಿದ್ದು ಪಿಂಚಣಿ ಸೇರಿದಂತೆ ಯಾವುದೇ ಅನುಕೂಲಗಳು ಸಿಗುತ್ತಿಲ್ಲ ಎಂದು ದೂರಿದರು. ನಿಮಗೆ ಬರಬೇಕಾಗಿರುವಂತಹ ಪಿಂಚಣಿ ಸೇರಿದಂತೆ ದ್ವಿಚಕ್ರ ವಾಹನವನ್ನು ನಾನೇ ಕೊಡಿಸುವುದಾಗಿ ಎಂಎಲ್ಸಿ ಇಂಚರ ಗೋವಿಂದರಾಜು ಭರವಸೆ ನೀಡಿದರು.

ಇದೇ ವೇಳೆ ಮಹಿಳೆಯೊಬ್ಬರು ಎ. ಗೊಲ್ಲಹಳ್ಳಿ ಗ್ರಾಮದಿಂದ ಬಂಗಾರಪೇಟೆ ಮತ್ತು ಕೋಲಾರ ನಗರಕ್ಕೆ ಹೋಗಲು ಬಸ್​ ಸಂಚಾರವಿಲ್ಲದ ಕಾರಣ ಶಾಲಾ ಕಾಲೇಜು ಮಕ್ಕಳು ಮತ್ತು ಗ್ರಾಮಸ್ಥರು ಸಂಚರಿಸಲು ಅನಾನುಕೂಲವಾಗಿದ್ದು, ಬಸ್​ಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net