

ಎನ್.ಆರ್.ಪುರ: ಮೋಸ ಹೋಗುವ ಜನರು ಇರುವವರೆಗೂ ಮೋಸ ಮಾಡುವ ಜನರು ಇದ್ದೇ ಇರುತ್ತಾರೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದರು.
ತಾಲೂಕಿನ ಬಿ.ಎಚ್.ಕೈಮರ ಸರ್ಕಲ್‌ನಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಆಶ್ರಯದಲ್ಲಿ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳನ್ನು ಬಯಲು ಮಾಡಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿನಿಂದ ಸಮಸ್ಯೆಗಳು ಇರುತ್ತವೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಸಮಸ್ಯೆ ಬಗೆಹರಿಸಲು ಸರಿಯಾದ ಮಾರ್ಗ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಸಮಸ್ಯೆಗಳಿಗೆ ಪಾಪ, ಪುಣ್ಯವನ್ನು ಹೊಣೆ ಮಾಡಿ ಮನಸ್ಸನ್ನು ದುರ್ಬಲ ಮಾಡಿಕೊಂಡರೆ ಕೆಲವರು ಇದನ್ನು ದುರುಪಯೋಗ ಮಾಡಿಕೊಂಡು ಶೋಷಣೆ ಮಾಡುತ್ತಾರೆ ಎಂದರು.
ಕರ್ನಾಟಕ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಹೊಸೂರು ಸುರೇಶ್ ಮಾತನಾಡಿ, ವೈಜ್ಞಾನಿಕ ಪರಿಷತ್ ವಿಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಸ್ಥೆಯಾಗಿದೆ. ಎಲ್ಲಿ ಮೌಢ್ಯ ಇದೆಯೋ ಅಲ್ಲಿ ನಮ್ಮ ತಂಡದವರು ಹೋಗಿ ಜನರಲ್ಲಿ ಧೈರ್ಯ ತುಂಬುತ್ತಾರೆ. ಈಗಾಗಲೇ 200ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿ ಜನರಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ತಾಲೂಕು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಕೆ.ಆರ್.ನಾಗರಾಜ್ ಪುರಾಣಿಕ್, ಸೀನಿಯರ್ ಚೇಂಬರ್ ಸದಸ್ಯ ಕೆ.ಎಂ.ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದ ಕುಮಾರ್, ಕೆ.ಎಸ್.ರಾಜ್‌ಕುಮಾರ್, ಎಸ್.ಎಸ್.ಜಗದೀಶ್ ಇದ್ದರು.