

ನಂಜನಗೂಡು: ಈ ಬಾರಿಯ ಚುನಾವಣೆ ಬಿಜೆಪಿಯನ್ನು ಸೋಲಿಸುವ ಚುನಾವಣೆ ಮಾತ್ರ ಆಗಿರುವುದಿಲ್ಲ. ಬದಲಾಗಿ ಜನರ ಬದುಕಿನಲ್ಲಿ ಬದಲಾವಣೆ ತರುವಂತಹ ಚುನಾವಣೆಯಾಗಿದ್ದು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದ ಭವಿಷ್ಯ ಉತ್ತಮಪಡಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಪರ ರೋಡ್ ಶೋನಲ್ಲಿ ಭಾಗಿಯಾಗಿ ಮತಯಾಚನೆ ನಡೆಸಿ ಮಾತನಾಡಿ, ನಂಜನಗೂಡಿನಲ್ಲಿ ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರನ್ನು ಅಭ್ಯರ್ಥಿಯಾಗಿಸಿದ್ದಾರೆ. ಹೀಗಾಗಿ ಕಾರ್ಯಕರ್ತರ ಆಸೆಯಂತೆ ದರ್ಶನ್ ಅವರನ್ನು ನಂಜನಗೂಡಿನಲ್ಲಿ ಕಣಕ್ಕಿಳಿಸಲಾಗಿದ್ದು, ಇಲ್ಲಿ ದರ್ಶನ್ ಅಭ್ಯರ್ಥಿ ಅಲ್ಲ. ನೀವೇ ಅಭ್ಯರ್ಥಿ ಎಂದು ಚುನಾವಣೆಯಲ್ಲಿ ಕೆಲಸ ಮಾಡಬೇಕು. ನಿಮ್ಮ ಮಕ್ಕಳನ್ನು ಸಲಹುವಂತೆ ದರ್ಶನ್‌ನನ್ನು ನೋಡಿಕೊಂಡು ನಂಜನಗೂಡಿನಿಂದ ವಿಧಾನಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ಭ್ರಷ್ಟತನದ ಬಗ್ಗೆ ಕಾರ್ಯಕರ್ತರಿಗೆ ಅರಿವಿದೆ. ಜನರಿಗೆ ಕೊಟ್ಟಿರುವ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಪಕ್ಷದಿಂದ ನೀಡಿರುವ ಗ್ಯಾರಂಟಿ ಖಂಡಿತಾ ಈಡೇರಿಸಲಿದ್ದೇವೆ. ಮತದಾರರು ಮುಂದಿನ ತಿಂಗಳಿನಿಂದ ಯಾವುದೇ ಕರೆಂಟ್ ಬಿಲ್ ಕಟ್ಟಬೇಕಿಲ್ಲ. ವರ್ಷಕ್ಕೆ ಪ್ರತಿ ಕುಟುಂಬದ ಮಹಿಳೆಯರಿಗೆ 24 ಸಾವಿರ ರೂ. ಸೇರುವುದು ನಿಶ್ಚಿತ. ಇದರೊಂದಿಗೆ ಪ್ರತಿಯೊಬ್ಬರಿಗೂ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಹಾಗೂ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡಲಾಗುವುದು. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಡಲು ಮತದಾರರು ಸಂಕಲ್ಪ ತೊಡಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ನಗರದ ಚಿಂತಾಮಣಿ ಗಣಪತಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಉತ್ಸಾಹದಿಂದ ಭಾಗಿಯಾದರು. ರಾಷ್ಟ್ರಪತಿ ರಸ್ತೆ, ಬಜಾರ್ ರಸ್ತೆ ಹಾಗೂ ಎಂಜಿಎಸ್ ರಸ್ತೆ ಮೂಲಕ ಸಂಚರಿಸಿದ ರೋಡ್ ಶೋ ವಿಶ್ವೇಶ್ವರಯ್ಯ ವೃತ್ತದಲ್ಲಿ ಅಂತ್ಯಗೊಂಡಿತು.
ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಅಭ್ಯರ್ಥಿ ಗಣೇಶ್ ಪ್ರಸಾದ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಕಂಠು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ಶ್ರೀಕಂಠ ನಾಯಕ ಇತರರು ಭಾಗವಹಿಸಿದ್ದರು.