

ಕುವೆಂಪು ಅವರು ಸಾಹಿತ್ಯವನ್ನು ಮನುಕುಲದ ಉದ್ಧಾರಕ್ಕಾಗಿ ರಚನೆ ಮಾಡಿದರು. ಕುವೆಂಪು ಅವರ ಜಗದ ಜಲಗಾರ ನಾಟಕದಲ್ಲಿ ಶಿವನೇ ಸಾಮಾನ್ಯ ಜನರ ಬಳಿ ಬರುವಂತೆ ಮಾಡಿದ್ದಾರೆ ಎಂದು ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ.ಸಿದ್ದಪ್ಪ ಹೇಳಿದರು.
ನಗರದ ಸಪ್ನಬುಕ್ ಹೌಸ್ ಆವರಣದಲ್ಲಿ ಲೆಗೆಸಿ ಕ್ಲಬ್ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಹಾಗೂ ಸಪ್ನಬುಕ್ ಹೌಸ್‌ನ 58ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದು ಕುವೆಂಪು ಅವರ ಸಾಹಿತ್ಯಕ್ಕೆ ಇರುವ ಶಕ್ತಿ. ಕುವೆಂಪು ಅವರ ಕೃತಿಗಳು ತಳವರ್ಗದವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಿದ್ದರೆ, ಮೇಲ್ವರ್ಗದವರಿಗೆ ಆತ್ಮವಿಮರ್ಶೆ ಹುಟ್ಟುವಂತೆ ಮಾಡಲಿದೆ ಎಂದರು.
ಕುವೆಂಪು ಅವರ ಮಾತುಗಳನ್ನು ಚಾಚು ತಪ್ಪದೆ ಪಾಲಿಸಿದರೆ ನಮ್ಮ ಸಮಾಜ ಸಮ ಸಮಾಜವಾಗಲಿದೆ. ಪ್ರತಿಯೊಬ್ಬರಿಗೂ ಸಮಾನತೆ ದೊರೆಯಬೇಕೆಂಬ ದೃಷ್ಟಿಯಿಂದ ಸರಳ ವಿವಾಹಕ್ಕೆ ಆದ್ಯತೆ ನೀಡಿದರು. ತೇಜಸ್ವಿ ಅವರ ಅಣ್ಣನ ನೆನಪು ಕೃತಿ ಓದಿದರೆ ಕುವೆಂಪು ಅವರ ಸಂಪೂರ್ಣ ವ್ಯಕ್ತಿತ್ವ ಕಣ್ಣ ಮುಂದೆ ಬರಲಿದೆ. ಕುವೆಂಪು ಅವರು ಧರ್ಮವನ್ನು ಎಲ್ಲೂ ವಿರೋಧ ಮಾಡಿದವರಲ್ಲ. ಧರ್ಮದಲ್ಲಿರುವ ನ್ಯೂನ್ಯತೆಗಳನ್ನು ಮಾತ್ರ ತೋರಿಸಿದರು. ಹೀಗಾಗಿ, ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆ ದೇವಿ ಪೂಜಿಸುವ ಬಾರ ಎಂದು ಸಲುಭವಾಗಿ ಹೇಳಿದವರು ಕುವೆಂಪು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಮಾತನಾಡಿ, ಹಿಂದೆ ಪುಸ್ತಕಗಳನ್ನು ಪ್ರೀತಿಸುವವರು ಸರಸ್ವತಿ ಪುತ್ರರಾಗಿರುತ್ತಿದ್ದರು. ಲಕ್ಷ್ಮೀದೇವಿಯನ್ನು ಆರಾಧಿಸುವವರು ಲಕ್ಷ್ಮೀಪುತ್ರರಾಗಿರುತ್ತಿದ್ದರು. ಆದರೆ, 21ನೇ ಶತಮಾನದಲ್ಲಿ ಜ್ಞಾನದ ಸಹಾಯದಿಂದ ಸರಸ್ವತಿ ಪುತ್ರರು ಲಕ್ಷ್ಮೀ ಪುತ್ರರಾಗಬಹುದು. ಇನ್ಫೋಸಿಸ್ ನಾರಾಯಣ ಮೂರ್ತಿ ಸರಸ್ವತಿ ಪುತ್ರರಾಗಿದ್ದವರು. ಆದರೆ, ಅವರು ನಂಬಿದ ವಿದ್ಯೆಯು ಕೈ ಹಿಡಿದ ಪರಿಣಾಮ ಇಂದು ಲಕ್ಷ್ಮೀ ಪುತ್ರರಾಗಿದ್ದಾರೆ ಎಂದರು.
ಸಪ್ನಬುಕ್ ಹೌಸ್ ಕೂಡ ಸರಸ್ವತಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಹೀಗಾಗಿ, ಲಕ್ಷ್ಮೀ ಪುತ್ರರಾಗಿ ಹಲವಾರು ಶಾಖೆಗಳನ್ನು ತೆರೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ, ಲೆಗೆಸಿ ಕ್ಲಬ್ ಅಧ್ಯಕ್ಷ ಡಿ.ವಿ. ದಯಾನಂದ್ ಸಾಗರ್ ಇತರರಿದ್ದರು.