

ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಪತ್ರಕರ್ತರದ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, ವಿಧಾನಮಂಡಲದ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆ ನಡೆಯುವ ಅಗತ್ಯವಿದೆ. ವಿಷಯಾಧಾರಿತ ಚರ್ಚೆಗೆ ಆದ್ಯತೆ ನೀಡಬೇಕು. ವಿಧಾನಸಭೆಯಲ್ಲಿ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಚರ್ಚೆಗೆ ಒತ್ತು ಕೊಡಬಾರದು ಎಂದರು.
ಬಹುತೇಕ ಶಾಸಕರು ಅಧಿವೇಶನದಲ್ಲಿ ಸಮರ್ಪಕವಾಗಿ ಪಾಲ್ಗೊಳ್ಳುವುದಿಲ್ಲ. ಪ್ರಮುಖ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗಲೂ ಅಸೆಂಬ್ಲಿ ಖಾಲಿಯಾಗಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿಧಾನಮಂಡಲ ಅಧಿವೇಶನಕ್ಕೆ ಕೋಟ್ಯಂತರ ರೂ. ಖರ್ಚಾಗುತ್ತದೆ. ಹಾಗಾಗಿ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಜವಾಬ್ದಾರಿ ಅರಿತು ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರು ಶಾಸನ ಸಭೆಗೆ ಆರಿಸಿ ಬರುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಉದ್ಯಮಿಗಳು ಶಾಸನಸಭೆ ಪ್ರವೇಶಿಸಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಏನಾಗಲಿದೆಯೋ ಗೊತ್ತಿಲ್ಲ ಎಂದು ಆತಂಕವ್ಯಕ್ತಪಡಿಸಿದರು.
ಇತ್ತೀಚಿನ ಚುನಾವಣೆಗಳಲ್ಲಿ ಗೆಲುವಿನ ಮಾನದಂಡ ಆಧರಿಸಿ ಟಿಕೆಟ್ ನೀಡುತ್ತಿದ್ದಾರೆ. ಜನರೊಂದಿಗೆ ಒಡನಾಟವಿದ್ದು, ಒಳ್ಳೆಯ ಹಿನ್ನೆಲೆ ಇದ್ದರೂ ಟಿಕೆಟ್ ಸಿಗುವುದಿಲ್ಲ. ಕೇವಲ ಗೆಲ್ಲುವ ಸಾಧ್ಯತೆ ಇರುವವರಿಗೆ ಮಾತ್ರ ಟಿಕೆಟ್ ಕೊಡುತ್ತಾರೆ ಎಂದು ಖಾದರ್ ಬೇಸರಿಸಿದರು.
ನನಗೆ ಸಚಿವನಾಗುವ ಅವಕಾಶವಿತ್ತು. ಈ ನಡುವೆ ಸ್ಪೀಕರ್ ಹುದ್ದೆ ದೊರೆತಿದ್ದು ಸಂತಸ ತಂದಿದೆ. ಸ್ಪೀಕರ್ ಆದ ನಂತರ ಎಲ್ಲರನ್ನೂ ಪಕ್ಷಾತೀತವಾಗಿ ನೋಡುತ್ತಿದ್ದೇನೆ. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಆಡಳಿತ -ಪ್ರತಿ ಪಕ್ಷಗಳ ಜಟಾಪಟಿ ಬಳಿಕ ಸ್ಪೀಕರ್ ವಿರುದ್ಧವೂ ದೂರುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು ಎಂದರು.
ಪ್ರತಿಕ್ರಿಯೆ ನೀಡುವುದಿಲ್ಲ: ಇತ್ತೀಚೆಗೆ ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆನ್ನಲಾದ ವಿಚಾರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಾದರ್ ಹೇಳಿದರು.
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ:
ಇದೇ ವೇಳೆ ವಿವಿಧ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ವಿ.ರಾವ್, ಸಿ.ಜೆ.ಪುನೀತ್, ದಯಾಶಂಕರ ಮೈಲಿ, ಗುರುಪ್ರಸಾದ್ ತುಂಬಸೋಗೆ, ಶಿಲ್ಪಾ, ಕೆ.ಪಿ.ನಾಗರಾಜ್, ನಜೀರ್ ಅಹಮದ್ ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ನಗರ ಉಪಾಧ್ಯಕ್ಷ ರವಿ ಪಾಂಡವಪುರ ಇತರರಿದ್ದರು.