ಜನನ, ಮರಣ ನೋಂದಣಿಗೆ ಒತ್ತು ನೀಡಿ; ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸೂಚನೆ

ಜನನ, ಮರಣ ನೋಂದಣಿಗೆ ಒತ್ತು ನೀಡಿ; ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸೂಚನೆ
Published on

ಹಾಸನ: ಜನನ ಮತ್ತು ಮರಣ ನೋಂದಣಿಗೆ ಹೆಚ್ಚು ಒತ್ತು ನೀಡಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನಾಗರಿಕ ನೋಂದಣಿ ಪದ್ಧತಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣ ಒಂದು ಉಚಿತ ಜನನ ಪ್ರಮಾಣ ಪತ್ರದೊಂದಿಗೆ ತಾಯಿಯೊಂದಿಗೆ ಮನೆಗೆ ಕಳುಹಿಸುವ ಧ್ಯೇಯೋದ್ದೇಶ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಉಪ ನೋಂದಣಿ ಘಟಕಗಳನ್ನು ಆರಂಭಿಸಲಾಗಿರುತ್ತದೆ ಎಂದು ತಿಳಿಸಿದರು.

ಅನಗತ್ಯ ನೋಂದಣಿಗಳನ್ನು ತಪ್ಪಿಸಲು ಜನನ, ಮರಣ ಘಟಿಸಿದ ಸ್ಥಳದಲ್ಲಿಯೇ ನೋಂದಣಿಯಾಗುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಜನನ, ಮರಣ ಎಲ್ಲಿ ಸಂಭವಿಸುತ್ತದೋ ಆ ವ್ಯಾಪ್ತಿಯ ನೋಂದಣಿ ಘಟಕದಲ್ಲಿ ಜನನ, ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜನನ, ಮರಣದ 21 ದಿನಗಳವರೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸ್ಥಳೀಯ ಸಂಸ್ಥೆಗಳ ನೋಂದಣಾಧಿಕಾರಿಗಳು, ವೈದ್ಯಾಧಿಕಾರಿಗಳು ನೋಂದಣಿ ಶುಲ್ಕ ವಿಧಿಸುವಂತಿಲ್ಲ. 21 ದಿನಗಳ ನಂತರ ಮತ್ತು 30 ದಿನಗಳೊಳಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಸ್ಥಳಿಯ ಸಂಸ್ಥೆಗಳ ನೋಂದಣಾಧಿಕಾರಿಗಳು, ವೈದ್ಯಾಧಿಕಾರಿಗಳು 20 ರೂ. ಶುಲ್ಕ ಪಡೆಯಬೇಕು. 30 ದಿನಗಳ ನಂತರ ಮತ್ತು ಒಂದು ವರ್ಷದ ಒಳಗೆ ನೋಂದಣಿದಾರರು ತಹಸೀಲ್ದಾರರು, ಆಯುಕ್ತರು, ಮುಖ್ಯಾಧಿಕಾರಿಗಳಿಂದ ಲಿಖಿತ ಆದೇಶವನ್ನು ಪಡೆದು 50 ರೂ. ಶುಲ್ಕದೊಂದಿಗೆ ನೋಂದಾಯಿಸಬೇಕಾಗಿರುತ್ತದೆ ಎಂದರು.

ಜನನ-ಮರಣ ನೋಂದಣಿಗೆ ಸಂಬಂಧಿಸಿದಂತೆ ಅಧಿಸೂಚಕರಾಗಿ ನೇಮಿಸಲಾಗಿರುವ ಗ್ರಾಮ ಸಹಾಯಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಾಲಾ ಮುಖ್ಯೋಪಾಧ್ಯಾಯರುಗಳು ತಮ್ಮ ಹಂತದಲ್ಲಿ ಜನನ-ಮರಣ ನೋಂದಣಿ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.

ಬೆಳೆ ಕಟಾವು ಸಮೀಕ್ಷೆಯನ್ನು ನಿಗಧಿತ ಅವಧಿಯೊಳಗೆ ಕ್ರಮಬದ್ಧವಾಗಿ ಮಾಡಿಸಲು ಗಮನಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕ್ರಮಬದ್ಧವಾಗಿ ಮಾಡದಿದ್ದಲ್ಲಿ ರೈತರಿಗೆ ನಷ್ಟ ಉಂಟಾಗಲಿದೆ ಈ ನಿಟ್ಟಿನಲ್ಲಿ ಎಚ್ಚರಿಕೆವಹಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಮೇಶ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಂಗಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಾಝೀಯಾ ನಾಝ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net