

ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯಲ್ಲಿ ಸರಸ್ವತಿ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ‘ಜಗನ್ನಾಥ ಸೆಂಟರ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್ ಸಂಸ್ಥೆ’ಯ ವೆಬ್‌ಸೈಟ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್ ಮುಖ್ಯಸ್ಥ ಜಗನ್ನಾಥ ಶೆಣೈ, ಉದ್ಯಮಿ ಸ್ಯಾಮ್ ಚೆರಿಯನ್, ಡಾ.ನರಸಿಂಹನ್ ಹಾಗೂ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ವೆಬ್‌ಸೈಟ್ ಅನಾವರಣಗೊಳಿಸಿದರು.
ಜಗನ್ನಾಥ ಶೆಣೈ ಮಾತನಾಡಿ, ಮೈಸೂರು ಅನಾದಿ ಕಾಲದಿಂದಲೂ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ವಿಶೇಷ ಒತ್ತು ನೀಡುತ್ತಾ ಬಂದಿದೆ. ಒಡೆಯರ್ ಕಾಲದಿಂದಲೂ ಮೈಸೂರು ಕಲೆ, ಸಂಸ್ಕೃತಿಗೆ ಹೆಸರುವಾಸಿ. ಆಗಿನ ಕಾಲದಲ್ಲಿ ದಸರಾ ಸಂದರ್ಭದಲ್ಲಿ ಇಂತಹ ಹಲವಾರು ಕಲೆಗಳು ಪ್ರದರ್ಶನಗೊಳ್ಳುತ್ತಿದ್ದವು. ಕಲೆಗೆ ಹಾಗೂ ಕಲಾವಿದರಿಗೆ ದಸರಾ ಅತ್ಯುತ್ತಮ ವೇದಿಕೆಯಾಗುತ್ತಿತ್ತು. ಆ ಪ್ರತೀತಿ ಇಂದಿಗೂ ಮುಂದುವರೆದಿದೆ. ಜತೆಗೆ ಮೈಸೂರಿನಲ್ಲಿ ಬಹಳ ಹಿಂದಿನಿಂದಲೂ ಕಲಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲೆಂದೇ ಹಲವಾರು ಸ್ಥಳಗಳಿವೆ. ಆದರೆ, ಕಾಲ ಬದಲಾಗುತ್ತಿದ್ದಂತೆ ಸಮಾಜದ ಬೇಡಿಕೆಗಳೂ ಹೆಚ್ಚುತ್ತವೆ. ಮೈಸೂರಿನಂತಹ ನಗರದಲ್ಲಿ ಜನರು ಸೇರಲು, ಕಲಾವಿದರು ಪ್ರದರ್ಶನಗಳನ್ನು ನೀಡಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಒಂದು ಸೂಕ್ತ ಸ್ಥಳದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಒಂದು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಕೇಂದ್ರದಲ್ಲಿ ಮೂರು ಆ್ಯಂಪಿ ಥಿಯೇಟರ್‌ಗಳು, ಒಂದು ಬೃಹತ್ ಸಭಾಂಗಣ, ಎಕ್ಸಿಬಿಷನ್ ಹಾಲ್, ಆರ್ಟ್ ಗ್ಯಾಲರಿ ಹಾಗೂ ಕೆಫೆಟೇರಿಯಾ ಇದೆ. ಒಂದು ಆ್ಯಂಪಿಥಿಯೇಟರ್ ವಿಶೇಷವಾಗಿ ಬಯಲಾಟ ಹಾಗೂ ಯಕ್ಷಗಾನದಂತಹ ಹೆಚ್ಚು ಸ್ಥಳಾವಕಾಶ ಅವಶ್ಯಕತೆಯಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆಂದೇ ನಿರ್ಮಾಣವಾಗಿದೆ. ಸಭಾಂಗಣದಲ್ಲಿ ಒಟ್ಟು 350 ಜನರು ಕುಳಿತುಕೊಳ್ಳಬಹುದು. ಆರ್ಟ್ ಗ್ಯಾಲರಿ ಹಾಗೂ ಎಕ್ಸಿಬಿಷನ್ ಹಾಲ್‌ನಲ್ಲಿ ನೂರಾರು ಜನರು ಆಗಿಂದಾಗ್ಗೆ ಓಡಾಡುತ್ತಿದ್ದರೂ ತೊಂದರೆಯಾಗದಷ್ಟು ವಿಶಾಲ ಸ್ಥಳ ಇದೆ. ಸೆಮಿನಾರ್‌ಗಳು, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳು, ಕಾರ್ಪೊರೇಟ್ ಇವೆಂಟ್‌ಗಳನ್ನೂ ಕೂಡ ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.