

ಬೆಂಗಳೂರು:
ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿ ಪೊಲೀಸರ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಸೈನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ ಕೃತ್ಯದಿಂದ ಬಂದ ಹಣದಲ್ಲಿ ಆಸ್ತಿ ಖರೀದಿಸಿರುವ ಸುಳಿವು ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಛೋಟಾ ತೆಲಗಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದಗಳನ್ನು ಮಾರಾಟ ಮಾಡುವ ಜಾಲದಲ್ಲಿ ಸಕ್ರೀಯವಾಗಿ ತೊಡಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಕೃತ್ಯದಿಂದ ಬಂದ ಹಣವನ್ನು ಆಸ್ತಿ ಮೇಲೆ ಹೂಡಿಕೆ ಮಾಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಆರೋಪಿಗಳಾದ ಛೋಟಾ ತೆಲಗಿ ಹಾಗೂ ಹರೀಶ್‌ನ್ನು ವಶಕ್ಕೆ ಪಡೆದಿರುವ ಎಸ್.ಜೆ.ಪಾರ್ಕ್ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಅಕ್ರಮ ಆಸ್ತಿಯ ಜಾಡು ಹಿಡಿದು ಹೊರಟಿದ್ದಾರೆ. ಛೋಟಾ ತೆಲಗಿ ಅಕ್ರಮವಾಗಿ ಸಂಪಾದಿಸಿದ ಹಣದಿಂದ ಆಸ್ತಿ ಹೊಂದಿರುವುದು ದೃಢಪಟ್ಟರೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.