

ಬೆಟ್ಟದಪುರ: ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿದು ವಾರಗಳು ಕಳೆಯುತ್ತ ಬಂದರೂ ಸ್ಥಳೀಯ ಆಡಳಿತ ವ್ಯವಸ್ಥೆ ಚುರಕಾಗದೆ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತಲುಪವಲ್ಲಿ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪಿಂಚಣಿ ಹಣ ಖಾತೆ ಸೇರದ ಪರಿಣಾಮ ಫಲಾನುಭವಿಗಳು ಸಂಕಷ್ಟ ಎದುರಿಸುವಂತಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇಲ್ಲಿನ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣೆ ಕರ್ತವ್ಯದಲ್ಲಿ ನಿರತರಾದರು. ಇದರಿಂದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವುದಕ್ಕೆ ಸಾಕಷ್ಟು ತೊಂದರೆ ಎದುರಿಸುವಂತಾಯಿತು. ಸದ್ಯ ಚುನಾವಣೆ ಪ್ರಕ್ರಿಯೆ ಮುಗಿದರೂ ಇಲಾಖೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿಲ್ಲ. ಅಲ್ಲದೆ, ಸರ್ಕಾರದಿಂದ ಬರಬೇಕಾದ ಪಿಂಚಣಿ ಹಣ ಸಹ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.
ನಿತ್ಯ ತಪ್ಪದ ಅಲೆದಾಟ: ಪಿರಿಯಾಪಟ್ಟಣ ತಾಲೂಕಿನಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಬರುವ ಪಿಂಚಣಿ ಹಣವೇ ವಯಸ್ಸಾದ ಹಿರಿಯರಿಗೆ ಪ್ರಮುಖ ಆಧಾರವಾಗಿದೆ. ಆದರೆ ಎರಡು ತಿಂಗಳು ವಿಳಂಬವಾಗಿರುವ ಪರಿಣಾಮ ಅವರೀಗ ಅಸಹಾಯಕರಾಗಿದ್ದಾರೆ. ಅಂಗವಿಕಲರು, ವಿಧವೆಯರು ಸಹ ಮಾಸಿಕ ಪಿಂಚಣಿ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರದಿಂದ ಪಿಂಚಣಿ ಬಿಡುಗಡೆಯಾಗಿಲ್ಲ. ಪ್ರಸ್ತುತ ಮೇ ತಿಂಗಳು ಮುಗಿಯುತ್ತ ಬಂದಿದ್ದರೂ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿಲ್ಲ. ಫಲಾನುಭವಿಗಳು ನಿತ್ಯ ಪಿಂಚಣಿಗಾಗಿ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಅಲೆಯುವಂತಾಗಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ವೃದ್ಧೆಯರು ಮತ್ತು ಅಂಗವಿಕಲರು ದೈನಂದಿನ ಖರ್ಚಿಗಾಗಿ ತಿಂಗಳ ಪಿಂಚಣಿ ಹಣವನ್ನೇ ಅವಲಂಬಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆಗದ ಸರ್ಕಾರಿ ಕೆಲಸ: ತಾಲೂಕಿನ ವಿವಿಧೆಡೆ ಕಳೆದ ವಾರದಿಂದ ಮಳೆಯಾಗಿ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭೂಮಿ ಹದಗೊಳಿಸುವ ಕಾರ್ಯ ಬಿರುಸುಗೊಂಡಿದೆ. ಅಲ್ಲದೆ ಬಿತ್ತನೆಬೀಜ, ರಸಗೊಬ್ಬರ ಹಾಗೂ ಸೊಸೈಟಿಗಳಲ್ಲಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಲ್ಲಿ ರೈತರು ನಿರತರಾಗಿದ್ದಾರೆ. ಆದರೆ ಈ ಸೌಲಭ್ಯಗಳನ್ನು ಪಡೆಯಲು ಬೇಕಾದ ದಾಖಲೆಗಾಗಿ ಸಂಬಂಧಿಸಿದ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿದೆ. ಸ್ಥಳೀಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದೆ ಇರುವುದರಿಂದ ಸರ್ಕಾರಿ ಕೆಲಸಗಳು ನಡೆಯದಂತಾಗಿದೆ. ಅರ್ಹರು ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.
ಇನ್ನು ಗ್ರಾಮಲೆಕ್ಕಾಧಿಕಾರಿಗಳು ಸಂಪರ್ಕಕ್ಕೆ ಸಿಗದೆ ಸಾರ್ವಜನಿಕರು ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ-ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭವಾಗಿ ದಾಖಲಾತಿ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯಲು ಸ್ಥಳೀಯ ಅಧಿಕಾರಿಗಳನ್ನು ಎದುರುನೋಡುವ ಸ್ಥಿತಿ ಪಾಲಕರಿಗೆ ಬಂದೊದಗಿದೆ.