ಚುನಾವಣೆಯಲ್ಲಿ ಬೃಹತ್ ಹಾರಗಳ ಡಿಮಾಂಡ್ ಕುಸಿತ

Hara
Published on

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ದೇಶಾದ್ಯಂತ ಲೋಕಸಭಾ ಚುನಾವಣೆ ಅಂಗವಾಗಿ ಮತ ಭೇಟೆಯಲ್ಲಿ ತೊಡಗಿರುವ ರಾಷ್ಟ್ರೀಯ, ಪ್ರಾದೇಶಿಕ ಒಳಗೊಂಡು ವಿವಿಧ ಪಕ್ಷಗಳ ಪ್ರಮುಖ ನಾಯಕರು ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಅವರನ್ನು ಸ್ವಾಗತಿಸಲು ನವನವೀನ ಮಾದರಿಯ ಬೃಹದಾಕಾರದ ಮಾಲೆಗಳು ತಯಾರಾಗುತ್ತಿವೆ. ಆದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಇರುವಷ್ಟು ಡಿಮಾಂಡ್ ಕರ್ನಾಟಕದಲ್ಲಿ ಇಲ್ಲವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಯಾವುದೇ ಕ್ಷೇತ್ರ ಪ್ರವೇಶಿಸಿದರೂ ಬೇಡಿಕೆ ಕಂಡು ಬಂದಿತ್ತು. ವಿವಿಧ ಫ್ಲವರ್ ಸ್ಟಾಲ್‌ಗಳಿಗೆ ಪುಷ್ಪಗಳು ಸೇರಿ ಇನ್ನಿತರೆ ವಸ್ತುಗಳಿಂದ ತಯಾರಿಸುವ ಇಂತಹದ್ದೇ ಹಾರ ಬೇಕೆಂದು ಅಭಿಮಾನಿಗಳು ಒತ್ತಡ ಹಾಕಿ ಕಾದು ಖರೀದಿಸಿದ್ದರು. ಆಗ ಇದ್ದಂತಹ ಕ್ರೇಜ್ ಲೋಕಸಭಾ ಚುನಾವಣೆ ವೇಳೆ ನಾಡಿನ 28 ಕ್ಷೇತ್ರಗಳ ಪೈಕಿ ಹಲವೆಡೆ ಸಂಪೂರ್ಣ ಕಡಿಮೆಯಾಗಿದೆ.

ಸೇಬು, ಕಿತ್ತಳೆ, ಒಣ ಕೊಬ್ಬರಿ, ಮೋಸುಂಬಿ, ಬೆಲ್ಲದ ಹಣ್ಣು, ಬೆಲ್ಲದ ಅಚ್ಚು, ಕ್ಯಾಪ್ಸಿಕಂ, ತಂಪು ಪಾನಿಯ ಪೊಟ್ಟಣ ಹೀಗೆ.. ಅನೇಕ ಮಾದರಿಗಳಲ್ಲಿ ಅತ್ಯಾಕರ್ಷಕವಾಗಿ ಸಿದ್ಧಗೊಳ್ಳುವ ಮಾಲೆಗಳಿಗೆ ಗಾತ್ರ, ಎತ್ತರಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗುತ್ತದೆ. ಒಂಬತ್ತರಿಂದ 15 ಎಳೆಯ ಬೃಹದಾಕಾರದ ಒಂದು ಮಾಲೆ ತಯಾರಿಸಲು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೂ ಅಧಿಕ ಮೌಲ್ಯವಿದೆ. ಹೀಗಾಗಿ ಖರ್ಚು ಅಭ್ಯರ್ಥಿ ಹೆಸರಿಗೆ ಹೋಗಲಿದೆ ಎಂಬ ಗೊಂದಲಗಳು ಕೆಲವೆಡೆ ಇವೆ.

ರಾಜ್ಯದಲ್ಲೂ ಸೂರ್ಯನ ಪ್ರಖರತೆ ದಿನೇ ದಿನೆ ಹೆಚ್ಚುತ್ತಿದೆ. ಬರಗಾಲದಿಂದಾಗಿ ಅಂತರ್ಜಲವೂ ಕುಸಿದಿದೆ. ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಳುವರಿ ಕುಸಿತದಿಂದಾಗಿ ಹೂವಿನ, ಹಣ್ಣಿನ, ತರಕಾರಿಗಳ ದರಗಳು ಹೆಚ್ಚಾಗಿವೆ. ಈ ನಡುವೆ ಚುನಾವಣಾ ಕಾವು ಏರುತ್ತಿದ್ದು, ಹಾರಗಳ ದರ ಕೇಳಿ ಅನೇಕ ಕಾರ್ಯಕರ್ತರು ಹಿಂದಿರುಗುತ್ತಿದ್ದಾರೆ.

ಬಿಡುವಿಲ್ಲದೆ ವೈವಿಧ್ಯಮಯ ಹಾರಗಳ ಸಿದ್ಧತೆಯಲ್ಲಿ ತೊಡಗುವ ಕಸುಬುದಾರರಿಗೆ ಏಪ್ರಿಲ್, ಮೇ ತಿಂಗಳಲ್ಲೂ ಜಾತ್ರೆಗಳಿರುವ ಕಾರಣ ಉತ್ಸವಗಳ ಮೇಲೂ ಅವಲಂಬನೆ ಹೆಚ್ಚಾಗಿದೆ. ಆದರೆ, ಬಿಸಿಲಿಗೆ ತಯಾರಕರು ಹೈರಾಣಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ, ಮಾಜಿ ಸಿಎಂಗಳು, ಹೊರ ರಾಜ್ಯಗಳಿಂದ ಆಗಮಿಸಬಹುದಾದ ವಿವಿಧ ಪಕ್ಷಗಳ ಮುಖ್ಯಸ್ಥರು, ನಾಯಕರ ಬೃಹತ್ ರೋಡ್ ಶೋ, ಅದ್ದೂರಿ ಸಮಾವೇಶಗಳು ಒಳಗೊಂಡು ರಾಜ್ಯದೆಲ್ಲೆಡೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಒಂದಿಷ್ಟು ಬೇಡಿಕೆ ಬರಬಹುದು ಎಂಬ ನಿರೀಕ್ಷೆಗಳು ಹಲವರಲ್ಲಿದೆ.

ಬರ ಪೆಟ್ಟು ನೀಡಿದೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣಕ್ಕೆ ಲೆಕ್ಕ ಹಾಕದೆಯೇ ತಮಗಿಷ್ಟವಾದ ಹಾರವೇ ಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದು ಕೊಂಡೊಯ್ದಿದ್ದರು. ಆದರೆ, ಬರಗಾಲ ಹಿನ್ನೆಲೆಯಲ್ಲಿ ಅನೇಕರ ಬಳಿ ಹಣವಿಲ್ಲ. ಇದು ಕೂಡ ಒಂದು ರೀತಿ ಪೆಟ್ಟು ನೀಡಿದೆ. ಮತ್ತೊಂದೆಡೆ ಹಬ್ಬ, ಜಾತ್ರೆಗಳು ಎದುರಾಗಿರುವ ಕಾರಣ ಚುನಾವಣಾ ಪ್ರಚಾರದಲ್ಲಿ ಹಾರಗಳಿಗೆ ಹಿಂದಿಗಿಂತ ಡಿಮ್ಯಾಂಡ್ ಕಡಿಮೆ ಆಗಿರಬಹುದು ಎನ್ನುತ್ತಾರೆ ಮಾಲೆ ತಯಾರಕರಾದ ಬೆಂಗಳೂರಿನ ರಾಜೇಶ್, ನವೀನ್.

ಡಿಮಾಂಡ್‌ ಕಡಿಮೆ: ಕಳೆದ ಚುನಾವಣೆಯಲ್ಲಿ ರಾಜ್ಯದ ವಿವಿಧೆಡೆ 10 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೂ ಹಾರ ತಯಾರಿಸಿ ವಿವಿಧ ಜಿಲ್ಲೆಗಳಿಗೂ ಕಳುಹಿಸಿದ್ದೇವೆ. ಹೂವು ಮೊದಲಿನಂತೆ ಸಿಗುತ್ತಿಲ್ಲ. ಒಂದೆಳೆಯ ಚಿಕ್ಕ ಹಾರಗಳೇ 500 ರೂ.ನಿಂದ 1ಸಾವಿರ ರೂ. ದಾಟಿದೆ. ಈ ಬಾರಿ ಡಿಮಾಂಡ್ ಕಡಿಮೆಯಾಗಿದೆ ಎನ್ನುತ್ತಾರೆ ಚಿತ್ರದುರ್ಗ ಶೃತಿ ಫ್ಲವರ್ ಸ್ಟಾಲ್‌ನ ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net