

ರಾಮನಗರ : ಚನ್ನಪಟ್ಟಣ ಮತ್ತು ರಾಮನಗರ ನಗರಸಭೆಗಳಿಗೆ ಏ.27ರಂದು ನಡೆದ ಚುನಾವಣೆಯಲ್ಲಿ ಒಟ್ಟು ಶೇ.68.61ರಷ್ಟು ಮತದಾನವಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಜನತೆ ಮತದಾನ ಮಾಡಲು ಮುಂದೆ ಬರುವರೇ ಎನ್ನುವ ಆತಂಕದ ನಡುವೆ ಉತ್ತಮ ಪ್ರಮಾಣದಲ್ಲಿ ಮತದಾನವಾಗಿದೆ. ಮೀಸಲಾತಿ ವಿಚಾರಣೆ ಬಾಕಿ ಇದ್ದ ಕಾರಣದಿಂದಾಗಿ ಅವಧಿ ಮುಗಿದರೂ ನಗರಸಭೆ ಚುನಾವಣೆ ನಡೆದಿರಲಿಲ್ಲ. ಆದರೆ, ಚುನಾವಣೆ ೋಷಣೆ ಆದ ನಂತರ ಕರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಚುನಾವಣೆ ಮೇಲೆ ಆತಂಕದ ಕಾರ್ಮೋಡ ಆವರಿಸಿತ್ತು. ಆದರೆ ಎಲ್ಲವನ್ನೂ ಮೆಟ್ಟಿನಿಂತು ಚುನಾವಣೆ ನಡೆಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದ್ದು, ಇದೀಗ ಮತ ಎಣಿಕೆ ದಿನದತ್ತ ಎಲ್ಲರ ಚಿತ್ತ ನೆಟ್ಟಿದೆ.
ಹಿಂದೆಯೂ ಇಷ್ಟೇ ಆಗಿತ್ತು: ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗೆ ಬರೋಬ್ಬರಿ 8 ವರ್ಷಗಳ ನಂತರ ಚುನಾವಣೆ ನಡೆದಿದೆ. 2013ರ ಮಾರ್ಚ್‌ನಲ್ಲಿ ಚುನಾವಣೆ ನಡೆದಿತ್ತು. ಆನಂತರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಸಂಬಂಧ ವಿಚಾರಣೆ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಆಯ್ಕೆ ಸುಮಾರು ಒಂದು ವರ್ಷ ಕಾಲ ವಿಳಂಬವಾಗಿತ್ತು. ಆದರೆ 2013ರಲ್ಲಿ ನಡೆದ ಚುನಾವಣೆಯಲ್ಲಿಯೂ ಈಗ ನಡೆದಷ್ಟೇ ಪ್ರಮಾಣದಲ್ಲಿ ಮತದಾನವಾಗಿತ್ತು ಎನ್ನುವುದು ವಿಶೇಷ. ರಾಮನಗರದಲ್ಲಿ ಈ ಬಾರಿ ಶೇ.66.82 ಮತದಾನವಾಗಿದ್ದರೆ, ಕಳೆದ ಬಾರಿ 69.42ರಷ್ಟು ಮಂದಿ ಮತ ಚಲಾಯಿಸಿದ್ದರು. ಚನ್ನಪಟ್ಟಣದಲ್ಲಿ ಈ ಬಾರಿ ಶೇ.70.99 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಕಳೆದ ಬಾರಿ 74.51 ಮಂದಿ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ನಾಳೆ ಲಿತಾಂಶ : ಈಗ ಚುನಾವಣೆ ಮುಗಿದಿದ್ದು, ಏ.30ದಂದು ನಡೆಯುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಅಭ್ಯರ್ಥಿಗಳಲ್ಲಿ ಹೆಚ್ಚಿನ ಮಂದಿ ಹೋಂ ಐಸೋಲೇಷನ್ ಆಗಿದ್ದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಇದರ ನಡುವೆ ಏ.30ರಂದು ಬರುವ ಲಿತಾಂಶ ಏನಾಗುವುದೋ ಎನ್ನುವ ಆತಂಕದಲ್ಲಿ ಕಾಲತಳ್ಳುತ್ತಿದ್ದಾರೆ.
ಶ್ಲಾಘನೆ : ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚುನಾವಣೆಯನ್ನು ಸಾಂಗವಾಗಿ ನಡೆಸಲಾಗಿದೆ. ಆದರೆ, ಈ ಬಾರಿ ಮತದಾರರ ಮತಕೇಂದ್ರಗಳ ಬದಲಾವಣೆ, ಕೆಲವರ ಹೆಸರು ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಕರೊನಾ ಸಂಕಷ್ಟದಲ್ಲೂ ಜಿಲ್ಲಾಡಳಿತ ಉತ್ತಮವಾಗಿ ಚುನಾವಣೆಯನ್ನು ನಡೆಸಿದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.
ಎಲ್ಲಿ ಎಷ್ಟು ? :
ಈ ಬಾರಿ ಎರಡೂ ನಗರಸಭೆಗಳಿಂದ ಒಟ್ಟು 68.61ರಷ್ಟು ಮತದಾನವಾಗಿದ್ದು, 1,40,677 ಮಂದಿ ಮತದಾರರ ಪೈಕಿ 96,524 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ರಾಮನಗರದಲ್ಲಿ ಒಟ್ಟು 38,974 ಮಂದಿ ಪುರುಷ ಮತದಾರರಲ್ಲಿ 26,766 ಮಂದಿ ಹಾಗೂ 41,029 ಮಂದಿ ಮಹಿಳಾ ಮತದಾರರಲ್ಲಿ 26,696 ಮಂದಿ ಮತಹಾಕಿದ್ದು, 11 ಮಂದಿ ತೃತೀಯ ಲಿಂಗಿಗಳು ಮತಹಾಕಿಲ್ಲ. ಶೇ 66.82 ಮತದಾನ ನಡೆದಿದೆ. ಇನ್ನು ಚನ್ನಪಟ್ಟಣದಲ್ಲಿ ಶೇ.70.99 ಮತದಾನವಾಗಿದ್ದು, 29,480 ಮಂದಿ ಪುರುಷ ಮತದಾರರಲ್ಲಿ 21,480 ಮಂದಿ ಹಾಗೂ 31,183 ಮಂದಿ ಮಹಿಳಾ ಮತದಾರರಲ್ಲಿ 21,582 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.