ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಭೋಗೇನಹಳ್ಳಿಯ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಲಿತ ಮುಖಂಡನ ಹತ್ಯೆ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ರಾಜಾರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹರೆಡ್ಡಿ ಬಂಧಿತರು. ಇನ್ನೊರ್ವ ಆರೋಪಿ ಮಂಜುನಾಥ್ ರೆಡ್ಡಿ ನಾಪತ್ತೆಯಾಗಿದ್ದಾನೆ. ಕೊಲೆಯಾದ ವ್ಯಕ್ತಿ ದಲಿತ ಮುಖಂಡ ಲಕ್ಷ್ಮೀ ನರಸಿಂಹಪ್ಪ.
ಆರೋಪಿ ಶ್ರೀರಾಮರೆಡ್ಡಿಯು ಲಕ್ಷ್ಮೀನರಸಿಂಹಪ್ಪನನ್ನು ಪ್ರೋತ್ಸಾಹಿಸಿ, ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದ. ಹಾಗೆಯೇ ಹಣಕಾಸಿನ ನೆರವು ನೀಡಿದ್ದ. ಇದರ ನಡುವೆ ನಿಲುವನ್ನು ಬದಲಾಯಿಸಿ ತನ್ನ ಪತ್ನಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾನೆ. ಇನ್ನೂ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕೊಟ್ಟಿರುವ ಹಣವನ್ನು ಕೂಡಲೇ ವಾಪಸ್ ನೀಡಲು ಒತ್ತಾಯಿಸಿದ್ದಾನೆ. ಆದರೆ, ಚುನಾವಣೆಯಲ್ಲಿ ಸೋತ ಲಕ್ಷ್ಮೀ ನರಸಿಂಹಪ್ಪ ಹಣ ನೀಡಲು ನಿರಾಕರಿಸುತ್ತಿದ್ದರ ಜತೆಗೆ ಸಿಕ್ಕಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಆಕ್ರೋಶಗೊಂಡ ಶ್ರೀರಾಮರೆಡ್ಡಿ ಸಂಬಂಧಿಕರಾದ ರಾಜಾರೆಡ್ಡಿ, ನರಸಿಂಹರೆಡ್ಡಿ, ಮಂಜುನಾಥ್ ರೆಡ್ಡಿಯೊಂದಿಗೆ ಸೇರಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಅದರಂತೆ ಡಾಬಾದಲ್ಲಿ ಊಟ ಸವಿದ ಬಳಿಕ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತ ಆರೋಪಿಗಳು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಲಕ್ಷ್ಮೀ ನರಸಿಂಹಪ್ಪನನ್ನು ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎಂಬ ಸುಳಿವರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಪ್ರಕರಣದ ತನಿಖೆಗೆ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡವನ್ನು ರಚಿಸಿದ್ದರು. ಈಗ ಮೂವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ತಲೆ ಮರೆಸಿಕೊಂಡಿರುವ ಮಂಜುನಾಥ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.