ಚಿನ್ನದ ಸರ ವಂಚಿಸುತ್ತಿದ್ದ ಟೆಕ್ಕಿ ಬಂಧನ

Published on

ಬೆಂಗಳೂರು: ಮದುವೆಯಾಗಬೇಕಿದ್ದ ಯುವತಿ ಜತೆ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ಹೋಗಿ, ಚಿನ್ನದ ಸರ ಪಡೆದು ಅಲ್ಲಿನ ನೌಕರರ ಗಮನ ಬೇರೆಡೆ ಸೆಳೆದು ಪರಾರಿಯಾಗುತ್ತಿದ್ದ ಆರೋಪಿ ಟೆಕ್ಕಿಯನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ರಾವ್ (35) ಬಂಧಿತ. ಆರೋಪಿಯ ವಿಚಾರಣೆಯಿಂದ 2 ಪ್ರಕರಣ ಪತ್ತೆಯಾಗಿದ್ದು, 120 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.10ರಂದು ಮಧ್ಯಾಹ್ನ 3 ಗಂಟೆಯಲ್ಲಿ ಮುರುಗೇಶ್‌ಪಾಳ್ಯದ ಚರ್ಚ್‌ಸ್ಟ್ರೀಟ್‌ನಲ್ಲಿರುವ ನವರತ್ನ ಜ್ಯುವೆಲ್ಸ್ ಪ್ಯಾಲೇಸ್‌ಗೆ ಯುವತಿ ಜೊತೆ ಭೇಟಿ ನೀಡಿದ್ದ. ಚಿನ್ನದ ಸರ ತೋರಿಸುವಂತೆ ಕೇಳಿದ್ದರು. ಅಲ್ಲಿನ ಸಿಬ್ಬಂದಿ, 40 ಗ್ರಾಂ ಮತ್ತು 16 ಗ್ರಾಂನ ಎರಡು ಸರ ಮಹಿಳೆಗೆ ಕೊಟ್ಟಿದ್ದರು. ಆಕೆ ಒಮ್ಮೆ ಕೊರಳಿನಲ್ಲಿ ಹಾಕಿಕೊಂಡು ನೋಡುವುದಾಗಿ ಹೇಳಿದ್ದಳು. ಈ ವೇಳೆಗಾಗಲೇ ಮಳಿಗೆಯಿಂದ ಹೊರಬಂದಿದ್ದ ರಾಘವೇಂದ್ರನ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ಆರೋಪಿ ರಾಘವೇಂದ್ರ ಈ ಹಿಂದೆ ಸ್‌ಟಾವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ವೇಳೆ ಕೆಲಸ ಹೋಗಿತ್ತು. ಅಲ್ಲದೆ, ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ಹೀಗಾಗಿ, ಯುವತಿ ಜೊತೆಗೂಡಿ ಕೃತ್ಯದಲ್ಲಿ ತೊಡಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೆಣ್ಣೂರಿನಲ್ಲಿ ನಡೆದಿದ್ದ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net