

ಚಿತ್ರದುರ್ಗ: ಶಿವಶಿಂಪಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲು ನೀಡಬೇಕು. ಇದಕ್ಕಾಗಿ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಲು ನಾನು ಸಿದ್ಧ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜ ಭಾನುವಾರ ಕುಲಗುರು ಶಿವದಾಸೀಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಈ ಹಿಂದೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ಇನ್ನೂ 2ಎ ಮೀಸಲಾತಿ ನೀಡಿಲ್ಲ. ಇದಕ್ಕಾಗಿ ಸರ್ಕಾರದ ಮೇಲ ಒತ್ತಡ ಹೇರಲು ಮಾಜಿ ಸಿಎಂ ಬಿಎಸ್‌ವೈ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಳಿಗೆ ನಿಯೋಗ ತೆರಳೋಣ ಎಂದರು.
ಮೀಸಲಾತಿ ಸಂಬಂಧ ಸಮಾಜದ ಹಲವರು ಅನೇಕ ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ನಾನೂ ಸಹ ಪತ್ರ ಬರೆದು ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರ ಗಮನ ಸೆಳೆದಿದ್ದೇನೆ. ಸಮಾಜದವರ ಮೀಸಲು ಬೇಡಿಕೆ ಈಡೇರಿಸುವಂತೆ ಎಲ್ಲ ಜಿಲ್ಲೆಗಳ ಶಾಸಕರ ಮೇಲೂ ಒತ್ತಡ ತರಬೇಕಿದೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಜಾಗೃತಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಸಮಾಜದ ಸಂಘಟನೆ ಬದಲಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಮೆರವಣಿಗೆ: ನಗರದ ರಂಗಯ್ಯನ ಬಾಗಿಲು ಶ್ರೀ ಮದಕರಿ ಗಣೇಶ ದೇವಾಲಯದಿಂದ ಗಾಯತ್ರಿ ಕಲ್ಯಾಣ ಮಂದಿರದವರೆಗೆ ನಡೆದ ಶಿವ ದಾಸಿಮಯ್ಯ ಭಾವಚಿತ್ರ ಮೆರವಣಿಗೆಗೆ ಸಮಾಜದ ಮುಖಂಡ ಮುಂಬೈನ ನಾಗೇಶ್ ವಿ.ಅಥಣಿ ಚಾಲನೆ ನೀಡಿದರು. ವೀರಗಾಸೆ, ನಾದಸ್ವರ ಸೇರಿ ಇತರೆ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.