ಚಿತ್ರದುರ್ಗ ಆಗಲಿ ರಾಜ್ಯದ 2ನೇ ರಾಜಧಾನಿ

CTD MURUGA
Published on

ಚಿತ್ರದುರ್ಗ: ಕನ್ನಡಿಗರ ಬದುಕಿಗೆ ಕನ್ನಡವೇ ಉಸಿರಾಗಿರಬೇಕೆಂದು ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಮುರುಘಾ ಮಠದಲ್ಲಿ ಮಂಗಳವಾರ, 34ನೇ ವರ್ಷದ 11ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರು ಎಂದಿದ್ದ ನಮ್ಮ ರಾಜ್ಯವು ಏಕೀಕರಣ ಚಳವಳಿ ಫಲವಾಗಿ ಕರ್ನಾಟಕ ಎಂದು ನಾಮಕರಣವಾಯಿತು.

ಆದರೆ ಹೆಸರು ಕರ್ನಾಟಕವೆಂದಾದರೂ ಕನ್ನಡಿಗರ ಬದುಕಿಗೆ, ಕನ್ನಡವಿನ್ನೂ ಉಸಿರಾಗಿಲ್ಲ. ಬೆಂಗಳೂರಿಂದು ಎಲ್ಲ ಕ್ಷೇತ್ರಗಳಲ್ಲೂ ಮುಂ ದಿದ್ದರೂ ಅಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಕೊಡಿ ಎಂದು ಒತ್ತಾಯಿಸುವ ಸ್ಥಿತಿ ಇದೆ. ಕರ್ನಾಟಕದ 2ನೇ ರಾಜಧಾನಿಯಾಗಿ ಚಿತ್ರದುರ್ಗ ಅಥವಾ ದಾವಣಗೆರೆಯನ್ನು ಘೋಷಿಸಿದರೆ ಕನ್ನಡದ ಅಭಿವೃದ್ಧಿಯಾಗುತ್ತದೆ ಎಂದರು.

ರಾಜ್ಯವನ್ನಾಳುವ ನಾಯಕರು ಕನ್ನಡದ ಉಳಿವಿಗೆ ಪ್ರಯತ್ನಿಸಬೇಕಿದೆ, ಈ ನಿಟ್ಟಿನಲ್ಲಿ ದೂರದೃಷ್ಟಿ ಮುಖ್ಯ. ನಮ್ಮ ಭಾಷೆ ಪ್ರೀತಿಸೋಣ. ಸಾಹಿತ್ಯದ ಅಧ್ಯನಯದಿಂದ ಜ್ಞಾನೋದಯವಾಗುತ್ತದೆ. ವಚನ ಸಾಹಿತ್ಯವು ವಿಶ್ವಕ್ಕೆ ದೊಡ್ಡ ಕೊಡುಗೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಒಂದು ನಾಣ್ಯದ ಎರಡು ಮುಖದಂತೆ, ದಂಪತಿ ಒಂದಾಗಿರಬೇಕು. ಮನಸ್ಸುಗಳು ಒಂದಾಗಬೇಕು. ವಿಚ್ಛೇದನವಾಗುತ್ತಿವೆ, ಪ್ರತಿಷ್ಠೆ ಬದಿಗಿಟ್ಟು ಪ್ರೀತಿ, ವಾತ್ಸಲ್ಯದಿಂದ ಜೀವನ ಸಾಗಿಸಬೇಕೆಂದರು.

ಮುಖ್ಯ ಅತಿಥಿ ಡಾ.ಅಶ್ವಿನ್ ಕುಮಾರ್ ಪಸಾರದ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕ ಸಮಸ್ಯೆ ಇದ್ದರೂ ಉದಾಸೀನ ಮಾಡಬಾರದೆಂದು ಎಚ್ಚರಿಸಿದರು.

ಡಾ.ಮಲ್ಲಪ್ಪ ಮಾತನಾಡಿ, ಜ್ಞಾನ ಮತ್ತು ಭಾಷೆ ನಡುವೆ ವ್ಯತ್ಯಾಸವಿದೆ. ಕನ್ನಡ ಅನ್ನದ, ಹೃದಯದ ಭಾಷೆಯಾಗಬೇಕು. ಪ್ರತಿಯೊಂದು ಭಾಷೆಗೂ ಅವುಗಳದ್ದೇ ಆದ ಮಹತ್ವವಿದೆ ಎಂದರು. ಸಾಹಿತಿ ಡಿ.ಸಿ. ಪಾಣಿ ಮಾತನಾಡಿದರು.

ಐದು ಜೋಡಿಗಳ ವಿವಾಹ ನೆರವೇರಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಸನ್ಮಾನಿಸಿದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ಕಣಿವೆ ಮಾರಮ್ಮ ದೇವಾಲಯ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಜ್ಞಾನಮೂರ್ತಿ ಸ್ವಾಗತಿಸಿ, ನವೀನ್ ಮಸ್ಕಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net