

ಬೆಟ್ಟದಪುರ: ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ಸೋಮವಾರ ಹನುಮ ಜಯಂತಿ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಹೋಮ-ಹವನ ಹಾಗೂ ಪೂಜೆ-ಪುನಸ್ಕಾರ ನೆರವೇರಿದವು. ಭಕ್ತರು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಬಳಿಕ 15 ಅಡಿ ಎತ್ತರದ ಹನುಮ ಮೂರ್ತಿಯನ್ನು ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತುಂತುರು ಮಳೆಯನ್ನು ಲೆಕ್ಕಿಸದೆ ಯುವಕರು-ಯುವತಿಯರು ಸೇರಿದಂತೆ ಮಹಿಳೆಯರು ಜೈ ಶ್ರೀರಾಮ್ ಹಾಡಿಗೆ ಕುಣಿದು ಕುಪ್ಪಳಿಸಿದರು.
ಹನುಮ ಜಯಂತಿ ಪ್ರಯುಕ್ತ ಗ್ರಾಮದ ವಿವಿಧ ಬೀದಿ ಹಾಗೂ ವೃತ್ತಗಳನ್ನು ಕೇಸರಿ ಬಾವುಟಗಳು ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮುಸ್ಲಿಮರು ಭಕ್ತರಿಗೆ ಮಜ್ಜಿಗೆ ವಿತರಿಸಿ ಭಾವೈಕ್ಯತೆ ಮೆರೆದರು. ಸಿಪಿಐ ಪ್ರಕಾಶ್, ಪಿಎಸ್‌ಐ ಪ್ರಕಾಶ್ ಎಂ.ಯತನಮನಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಶ್ರೀ ವೀರಾಂಜನೇಯ ಸೇವಾ ಸಮಿತಿಯಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕನೇರಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪೂಜಾ ಕಾರ್ಯಕ್ರಮಕ್ಕೆ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.