

ಬೆಂಗಳೂರು: ಆಟೋ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಚಾಲಕ ಹಾಗೂ ಆತನ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಕುಮಾರಸ್ವಾಮಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ತಾಹ, ಅಫ್ರೀದ್ ಪಾಷಾ ಮತ್ತು ಕರೀಮ್ ಎಂಬ ಮೂವರನ್ನು ಬಂಧಿಸಲಾಗಿದೆ. ಸುಕುಮಾರ ಕುಟುಂಬ ಸದಸ್ಯರು ಹಲ್ಲೆಗೊಳಗಾದವರು.
ಕುಮಾರಸ್ವಾಮಿ ಲೇಔಟ್ ಸಮೀಪದಲ್ಲಿರುವ ಪ್ರಗತಿಪುರದಲ್ಲಿ ಭಾನುವಾರ ರಾತ್ರಿ ೭.೩೦ ಕ್ಕೆ ಈ ಘಟನೆ ನಡೆದಿದ್ದು, ದೂರಿನನ್ವಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಕುಮಾರ್ ಮನೆಯ ಪಕ್ಕದ ನಿವಾಸಿಯಾದ ಸೈಯದ್ ತಾಹಿ ಇಬ್ಬರು ಕೂಡ ಆಟೋ ಚಾಲಕರಾಗಿದ್ದಾರೆ. ತಾಹಿ ಭಾನುವಾರ ನಮಾಜ್ ಮುಗಿಸಿಕೊಂಡು ಮನೆ ಬಳಿ ಬಂದಿದ್ದ. ಈತನ ಮನೆ ಮುಂದೆ ಆಟೋ ಪಾರ್ಕ್ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸುಕುಮಾರ್‌ನನ್ನು ಪ್ರಶ್ನಿಸಿದ್ದ. ಈ ಮಧ್ಯೆ ಇಬ್ಬರು ಕುಟುಂಬದವರ ನಡುವೆ ಮಾತಿನ ಚಕಮಕಿಗೆ ನಡೆದಿದೆ. ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ತಾಹಿ ಸುಮಾರು ೧೫ಕ್ಕೂ ಹೆಚ್ಚು ಮಂದಿ ಕರೆದುಕೊಂಡು ಬಂದು ಗಲಾಟೆ ಮಾಡಿಸಿದ್ದಾನೆ. ಈ ವೇಳೆ ಸುಕುಮಾರ್ ಹಾಗೂ ಮನೆಯವರ ಹಲ್ಲೆ ಮಾಡಿದ್ದಾರೆ. ಮನೆ ಬಳಿ ಹೋಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಇದನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ.
ಈ ಘಟನೆ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಂಸದರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿ ಘಟನೆ ಬಗ್ಗೆ ತಿಳಿಸಿ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರಿಗೆ ಕ್ರಮಕೈಗೊಳ್ಳುವಂತೆ ಉಲ್ಲೇಖಿಸಿದ್ದರು. ಹಿಂದೂಗಳೇ ಜಾಗರೂಕವಾಗಿರಿ ಎಂದು ಪೋಸ್ಟ್ ಮಾಡಿದ್ದರು. ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಘಟನೆ ಸಂಬಂಧ ಹಲ್ಲೆಗೊಳಗಾಗಿರುವ ಸುಕುಮಾರ್ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಒಬ್ಬ ಹುಡುಗನ ಜತೆ ಗಲಾಟೆ ಶುರುವಾಯಿತು. ನಂತರ ಆತ ಹೋಗಿ ಸುಮಾರು ೨೦ಕ್ಕೂ ಜನರನ್ನು ಕರೆದುಕೊಂಡು ಬಂದ. ಮನೆ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೂ ಹೊಡೆದಿದ್ದಾರೆ. ಕುತ್ತಿಗೆಯಲ್ಲಿನ ಮಾಂಗಲ್ಯ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಭಗವಾಧ್ವಜದ ಕಾರಣಕ್ಕೆ ಹಲ್ಲೆ?
ಇನ್ನು ಮತ್ತೊಂದೆಡೆ ಸುಕುಮಾರ್ ಮನೆ ಮೇಲೆ ಹಾರಿಸಲಾಗಿರುವ ಭಗವಾಧ್ವಜದ ಕಾರಣಕ್ಕೆ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ದೂರುದಾರರು ದೂರಿನ ಉಲ್ಲೇಖಿಸಿಲ್ಲ. ಒಂದು ವೇಳೆ ಅದರ ಬಗ್ಗೆ ಉಲ್ಲೇಖಿಸಿದರೆ ಖಂಡಿತಾ ಆ ಆಯಾಮದಲ್ಲಿ ತನಿಖೆಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಮು ಸಂಘರ್ಷವಾಗಿಲ್ಲ:
ಇನ್ನು ಘಟನೆ ಬಗ್ಗೆ ನಗರ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಆಟೋ ಪಾರ್ಕಿಂಗ್ ವಿಚಾರಕ್ಕಾಗಿ ಅಕ್ಕ-ಪಕ್ಕದ ಮನೆಯವರ ನಡುವೆ ಗಲಾಟೆಯಾಗಿದೆ. ಘಟನೆಯಲ್ಲಿ ಯಾರಿಗೂ ಗಂಭೀರವಾಗಿ ಗಾಯವಾಗಿಲ್ಲ. ಕೋಮುವಾದದ ವದಂತಿ ಹಬ್ಬಿಸಲಾಗುತ್ತಿದ್ದು, ತನಿಖೆಯಲ್ಲಿ ಇದುವರೆಗೂ ಆ ರೀತಿಯಲ್ಲಿ ಕಂಡುಬಂದಿಲ್ಲ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿಭದ್ರತೆ ಕಲ್ಪಿಸಲಾಗಿದೆ. ಘಟನೆಯ ಸಂಬಂಧ ಹಲ್ಲೆಗೊಳಗಾದ ಸುಕುಮಾರ್ ದೂರು ನೀಡಿದ್ದು, ಈಗಾಗಲೇ ಮೂವರನ್ನು ಬಂಧಿಸಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.