

ಚಾಮುಂಡಿ ಬೆಟ್ಟದಲ್ಲಿ ಶ್ರೀಮಹಾಬಲೇಶ್ವರಸ್ವಾಮಿ ರಥೋತ್ಸವ ಗುರುವಾರ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಭಕ್ತರು ರಥ ಎಳೆದು, ದೇವರ ದರ್ಶನ ಪಡೆದು ಪುನೀತರಾದರು.
ರಥೋತ್ಸವದಲ್ಲಿ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ 7.10 ರಿಂದ 7.35ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ನೆರವೇರಿತು. ಇದಕ್ಕೂ ಮುನ್ನ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ದೇವಸ್ಥಾನದ ಅರ್ಚಕರು ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ರುದ್ರಾಭಿಷೇಕ ನೆರವೇರಿಸಿದರು. ನಂತರ ಮಹಾಬಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಕೂರಿಸಿ ರಥ ಎಳೆಯಲಾಯಿತು. ಚಾಮುಂಡೇಶ್ವರಿ ದೇಗುಲಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಮಣೆಗಾರ್ ಪ್ರಸಾದ್, ನಾಗರಾಜು ಇತರರು ಭಾಗಿಯಾಗಿದ್ದರು.