ಚಾಮುಂಡಿ ಬೆಟ್ಟಕ್ಕೆ ಹೊತ್ತಿಕೊಂಡಿದ್ದ ಅಗ್ನಿ ಹತೋಟಿಗೆ

17
Published on

ಚಾಮುಂಡಿಬೆಟ್ಟದ ಎರಡು ಕಡೆ ಶುಕ್ರವಾರ ಏಕಕಾಲಕ್ಕೆ ಬೆಂಕಿ ಕಾಣಿಸಿಕೊಂಡಿತು. ಗಾಳಿಯ ವೇಗ ಹೆಚ್ಚಾಗಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿತು. ರಾತ್ರಿ 11.30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಅವಘಡದಲ್ಲಿ ಯಾವುದೇ ವನ್ಯಜೀವಿ ಮೃತಪಟ್ಟಿಲ್ಲ ಎಂದು ಮೈಸೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದರು.

ದನಗಾಹಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 2019-20ರಲ್ಲಿಯೂ ಬೆಟ್ಟಕ್ಕೆ ಬೆಂಕಿ ಬಿದ್ದು, 70 ಎಕರೆಯಷ್ಟು ಅರಣ್ಯ ನಾಶವಾಗಿತ್ತು. ಶುಕ್ರವಾರ ಮಧ್ಯಾಹ್ನ 12.30ರಲ್ಲಿ ಚಾಮುಂಡಿ ಬೆಟ್ಟದ ಬೆಂಟೆ ಹಳ್ಳ ಮತ್ತು ಗೊಲ್ಲ ಹಳ್ಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಕಿಡಿಗೇಡಿಗಳ ಕೃತ್ಯವಾಗಿದ್ದು, ಬೆಂಕಿ ಹಚ್ಚಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಾಮುಂಡಿ ಬೆಟ್ಟ ಮೀಸಲು ಅರಣ್ಯ 1516 ಎಕರೆ ಪ್ರದೇಶವನ್ನು ಹೊಂದಿದ್ದು, ಅಗ್ನಿ ಅವಘಡದಿಂದ 35 ಎಕರೆಗೂ ಹೆಚ್ಚು ಅರಣ್ಯ ನಾಶವಾಗಿದೆ. ಚಾಮುಂಡಿ ಬೆಟ್ಟದ ಕುರುಚಲು ಕಾಡಿನಿಂದ ಆವೃತವಾಗಿದ್ದು, ಬೇಸಿಗೆ ಹಿನ್ನೆಲೆ ಗಿಡಗಂಟಿಗಳು ಮತ್ತು ಹುಲ್ಲುಗಾವಲು ಒಣಗಿದ್ದರಿಂದ ಬೆಂಕಿ ವೇಗವಾಗಿ ವ್ಯಾಪಿಸಲು ಕಾರಣವಾಯಿತು. ಗಾಳಿಯ ವೇಗ 35 ಕಿ.ಮೀ. ಇದ್ದುದ್ದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಯಿತು. ಈ ಸಂದರ್ಭ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ನಮ್ಮೊಂದಿಗೆ ಸೇರಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು ಎಂದರು.

ಬೆಟ್ಟದಲ್ಲಿ 65 ಕಿ.ಮೀ. ರಸ್ತೆ ಮಾರ್ಗವಿದ್ದು, ಪ್ರತಿವರ್ಷ ರಸ್ತೆ ಬದಿಯಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ 5 ಕಿ.ಮೀ. ಬೆಂಕಿ ರೇಖೆ ಮಾಡಲಾಗಿತ್ತು. ಜತೆಗೆ ಬೆಟ್ಟದಲ್ಲಿ ಮೂರು ಕಡೆ ವಾಚಿಂಗ್ ಟವರ್ ಇದ್ದು, ಯಾವುದೇ ಬೆಂಕಿ ಅವಘಡ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ, ಒಂದೇ ಸಮಯದಲ್ಲಿ ಕಿಡಿಗೇಡಿಗಳು ಎರಡು ಕಡೆ ಬಿಂಕಿ ಹಚ್ಚಿದ್ದಾರೆ. ಇಲಾಖೆ ಮಾಹಿತಿ ಪ್ರಕಾರ ದನಗಾಹಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಹೊಸ ಹುಲ್ಲು ಬರಲೆಂದು ಒಣ ಹುಲ್ಲಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದರು.

ಬೆಂಕಿ ನಂದಿಸುವಲ್ಲಿ ಯಶಸ್ವಿ: ಗಾಳಿಯ ವೇಗಕ್ಕೆ ಬೆಂಕಿಯೂ ಹರಡಿದ್ದರಿಂದ ಬೆಟ್ಟದ ಕಡಿದಾದ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. 9 ಅಗ್ನಿಶಾಮಕ ವಾಹನಗಳ ಸಹಾಯದಿಂದ ಶುಕ್ರವಾರ ರಾತ್ರಿ 11.30ರ ಹೊತ್ತಿನಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದೆವು. ಇಲಾಖೆಯ ಮೂರು ತಂಡ ಬೆಂಕಿ ಬಿದ್ದ ಸ್ಥಳದಲ್ಲಿ ಹೊಸ ಬೆಂಕಿ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆಯಾಗಿ ಪರಿಶೀಲನೆ ನಡೆಸುತ್ತಿದೆ. ಡ್ರೋನ್ ಸಹಾಯದಿಂದ ಪರಿಶೀಲಿಸಿದ್ದು, ಬೆಂಕಿಯಾಡುತ್ತಿರುವ ಪ್ರದೇಶ ಕಂಡುಬಂದಿಲ್ಲ ಎಂದು ವಿವರಿಸಿದರು.

ವನ್ಯಜೀವಿಗಳಿಗೆ ಹಾನಿಯಾಗಿಲ್ಲ: ಬೆಟ್ಟದಲ್ಲಿ ಕಡವೆ, ಜಿಂಕೆ, ಪಕ್ಷಿಗಳು ಹಾಗೂ ಸರಿಸೃಪಗಳು ಇದ್ದು, ಬೆಂಕಿಯಿಂದ ಯಾವುದೇ ಅನಾಹುತ ಆಗಿಲ್ಲ. ಮುಂಜಾನೆಯಿಂದ ಇಲಾಖೆ ಸಿಬ್ಬಂದಿ ಬೆಂಕಿ ಬಿದ್ದ ಸ್ಥಳವನ್ನು ಪರಿಶೀಲಿಸಿದ್ದು, ಯಾವ ಪ್ರಾಣಿಗಳ ಕಳೇಬರ ಪತ್ತೆಯಾಗಿಲ್ಲ ಎಂದರು.

ಎರಡು ಚಿರತೆ ಮರಿ ಪ್ರತ್ಯಕ್ಷ

ಬೆಟ್ಟದಲ್ಲಿ 5 ಚಿರತೆಗಳಿರುವುದಾಗಿ ವರದಿಯಾಗಿತ್ತು. ಬೆಂಕಿ ಅವಘಡದ ಬಳಿಕ ದೇವಿಕೆರೆ ಹಿಂಭಾಗ ಶನಿವಾರ ಮುಂಜಾನೆ ಎರಡು ದೊಡ್ಡ ಚಿರತೆಗಳೊಂದಿಗೆ 2 ಮರಿ ಚಿರತೆಗಳು ಕಾಣಿಸಿಕೊಂಡಿವೆ. ಈ ಮೂಲಕ ಬೆಂಕಿಯಿಂದ ಯಾವುದೇ ವನ್ಯಜೀವಿಗೆ ಹಾನಿಯಾಗಿಲ್ಲ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು ಎಂದರು.

ಕಾಂಪೌಂಡ್ ನಿರ್ಮಾಣ: ಚಾಮುಂಡಿ ಬೆಟ್ಟ ಮೀಸಲು ಅರಣ್ಯಕ್ಕೆ ಜಾನುವಾರುಗಳು ಮತ್ತು ಮನುಷ್ಯರ ಅಕ್ರಮ ಪ್ರವೇಶವನ್ನು ತಡೆಯುವ ಸಲುವಾಗಿ ಬೆಟ್ಟದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಬೆಟ್ಟದ ಅರಣ್ಯ ಪ್ರದೇಶ 15 ಕಿ.ಮೀ. ಸರಹದ್ದು ಹೊಂದಿದ್ದು, ಈಗಾಗಲೇ 550 ಮೀಟರ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. 250 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಉಳಿದ ಜಾಗದಲ್ಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು. ಬೆಟ್ಟಕ್ಕೆ 4 ಕಡೆ ಪ್ರವೇಶವಿದೆ. ಎಲ್ಲವನ್ನೂ ನಾವು ಮಾನಿಟರ್ ಮಾಡೋದು ಕಷ್ಟವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net