ಚಳ್ಳಕೆರೆ ಯುಜಿಡಿಗೆ 260 ಕೋಟಿ ರೂ.ಅನುದಾನಕ್ಕೆ ಒತ್ತಾಯ

CTD--0002
Published on

ಚಿತ್ರದುರ್ಗ: ಬೆಳೆಯುತ್ತಿರುವ ವೇಗಕ್ಕೆ ಅನುಗುಣವಾಗಿ ಚಳ್ಳಕೆರೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣದ ಅಗತ್ಯವಿದೆ. ಆದ್ದರಿಂದ ಇದಕ್ಕೆ ಅಗತ್ಯವಿರುವ 260 ಕೋಟಿ ರೂ.ಅನುದಾನ ಒದಗಿಸುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು. ಬೆಳಗಾವಿಯಲ್ಲಿ ಸೋಮವಾರ ಪ್ರಾ ರಂಭವಾದ ಚಳಿಗಾಲದ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅನುದಾನ ಮಂಜೂರಾತಿಗೆ ಸರ್ಕಾರ ವನ್ನು ಒತ್ತಾಯಿಸಿದರು.

ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನಗರಕ್ಕೆ ಉತ್ತಮ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಆಶಯವಾಗಿದೆ. ಚಳ್ಳಕೆರೆ ಯುಜಿಡಿ ಗಾಗಿ 2013ರಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2021ರಲ್ಲಿ ಈ ಯೋಜನೆಗೆ 197 ಕೋಟಿ ರೂ.ಅಂದಾಜಿಸಲಾಗಿತ್ತು. ಆದರೆ ಈಗ ಯೋಜನೆ ವೆಚ್ಚ 253 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ಯೋಜನೆ ಜಾರಿಗೆಗಾಗಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದರು ಎಂದರು. ರಘುಮೂರ್ತಿ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,ಈ ಯೋಜನೆಗೆ ಈಗ ಅಂದಾಜು 260 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಣಕಾಸು ಇಲಾಖೆ ಸಲಹೆ ಪಡೆದು,ಹಣಕಾಸಿನ ಲಭ್ಯತೆ ನೋಡಿಕೊಂಡು,ಯೋಜನೆ ಜಾರಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿ ಅವರೇ ಯೋಜನೆ ಜಾರಿಗೆ ಆಸಕ್ತಿ ತೋರಿಸಿದ್ದು,ಆದ್ದರಿಂದ ಅವರೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net