

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ದೇವಾಲಯದ ಉದ್ಘಾಟನೆ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತ್ತು.
ದೇವರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 3 ದಿನಗಳಿಂದ ವಿಶೇಷ ಪೂಜೆಗಳು ಜರುಗಿದ್ದವು. ಗುರುವಾರ ಸಂಜೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಗ್ರಾಮದ ಕೆರೆ ಬಳಿ ವಿಶೇಷ ಪೂಜೆ ನೆರವೇರಿಸಿ, ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿ ಬೆಳ್ಳಿರಥದಲ್ಲಿ ಕೂರಿಸಿ ಕಳಸ ಹೊತ್ತ ಮಹಿಳೆಯರೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶುಕ್ರವಾರ ಮುಂಜಾನೆ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯ ಪ್ರತಿಷ್ಠಾಪನೆಯು ಅರ್ಚಕರಾದ ಹರೀಶ ಆರಾಧ್ಯ, ಮಂಜು ಆರಾಧ್ಯ ಹಾಗೂ ಸುನೀಲ್ ಆರಾಧ್ಯ ನೇತೃತ್ವದಲ್ಲಿ ನೆರವೇರಿತ್ತು.
ದೇವಸ್ಥಾನ ಉದ್ಘಾಟನೆ ಸಮಾರಂಭ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭಾ ವೇದಿಕೆ ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ, ಶಾಸಕ ಕೆ.ಮಹದೇವ್ ಸೇರಿದಂತೆ ಗಣ್ಯರು ಉದ್ಘಾಟಿಸಿದರು.
ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ನಾವು ಬದುಕುವ ನಾಲ್ಕು ದಿನಗಳಲ್ಲಿ ದೇವರು ಮೆಚ್ಚುವಂತಹ ಒಳ್ಳೆ ಕೆಲಸ ಮಾಡಬೇಕು. ಪ್ರತಿಯೊಬ್ಬರನ್ನು ದೇವರು ಗಮನಿಸುತ್ತಾ ಇರುತ್ತಾನೆ. ಚಪ್ಪರದಹಳ್ಳಿ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ, ಎಲ್ಲರೂ ಒಗ್ಗೂಡಿಕೆಯಿಂದ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ನನ್ನ ಮಗ ಹುಣಸೂರು ಕ್ಷೇತ್ರದಲ್ಲಿ ಹಾಗೂ ಕೆ.ಮಹದೇವ್ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ, ಚಪ್ಪರದಹಳ್ಳಿ ಅಭಿವೃದ್ಧಿ ಹೊಂದಿದ ಗ್ರಾಮವಾಗಿದೆ. ಉತ್ತಮ ರಸ್ತೆಗಳು ನಿರ್ಮಾಣವಾಗಿವೆ. ಉಳಿದ ಇನ್ನೊಂದು ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಶಾಸಕ ಕೆ.ವೆಂಕಟೇಶ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಮಿತಿಯಿಂದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಎಂಟು ಅಡಿಯ ಮಹಿಷಾಸುರನ ಪ್ರತಿಮೆ ಬಳಿ ಭಕ್ತಾದಿಗಳು ಸೆಲ್ಫಿ, ಫೋಟೋ ಕ್ಲಿಕಿಸಿಕೊಂಡರು.
ತಾಲೂಕು ಜೆಡಿಎಸ್ ಘಟಕದ ಅಣ್ಣಯ್ಯಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್, ಮಾಜಿ ಪುರಸಭೆ ಅಧ್ಯಕ್ಷ ಮಂಜುನಾಥ್‌ಸಿಂಗ್, ವೈದ್ಯಾಧಿಕಾರಿ ಡಾ.ಸಂದೀಪ್, ಡೇರಿ ಅಧ್ಯಕ್ಷ ವಸಂತ್, ಸೊಸೈಟಿ ಅಧ್ಯಕ್ಷ ಪ್ರಸನ್ನ, ಗ್ರಾಪಂ ಸದಸ್ಯರಾದ ಸಿ.ಕೆ ವೆಂಕಟೇಶ್, ಸಿ.ಪಿ.ಸುರೇಶ್, ಸುನೀತಾ ಮಂಜು, ಸರಸ್ವತಿ ಅರುಣ್, ಎಚ್.ಎಸ್.ದೇವೇಗೌಡ, ಮುಖಂಡರಾದ ಹನುಮಂತ್, ಜನವರೇಗೌಡ, ಮರೀಗೌಡ, ಕಾಳೇಗೌಡ, ರಾಮೇಗೌಡ, ಪುಟ್ಟರಾಜು, ರಾಜೇಗೌಡ, ನಿಂಗರಾಜೇಗೌಡ, ಅಪ್ಪಾಜಾಚಾರಿ, ಏಲಕ್ಕಿಗೌಡ, ಸಣ್ಣತಮ್ಮೇಗೌಡ, ಸಿ.ಆರ್.ಅಂಜನೀಗೌಡ, ಸಿ.ಆರ್ ಪ್ರಸನ್ನ, ತಾಂಡವಮೂರ್ತಿ, ಸಿ.ಎನ್.ಬಸವರಾಜು, ನಂಜುಂಡೇಗೌಡ, ಕಾಳೇಗೌಡ, ಚಂದ್ರೇಗೌಡ, ಅಣ್ಣೇಗೌಡ, ಹುಣಸೆಕೊಪ್ಪಲು ಮಹದೇವ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಇದ್ದರು.