

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಗ್ರಾಮದಲ್ಲಿ ಜಮೀನು ಖರೀದಿ ವಿಚಾರವಾಗಿ ಇಬ್ಬರ ನಡುವೆ ಶನಿವಾರ ರಾತ್ರಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಬಾಗೂರು ನಿವಾಸಿ ಮಂಜುನಾಥ್(34) ಕೊಲೆಯಾದ ವ್ಯಕ್ತಿ, ಅದೇ ಗ್ರಾಮದ ರಾಮು(33) ಕೊಲೆಗೈದು ತಲೆಮರೆಸಿಕೊಂಡಿದ್ದಾನೆ.
ಸೋದರ ಸಂಬಂಧಿಗಳಾಗಿದ್ದ ಮಂಜುನಾಥ್ ಹಾಗೂ ರಾಮು ನಡುವೆ ಜಮೀನು ಖರೀದಿ ವಿಚಾರವಾಗಿ ಹಲವು ವರ್ಷಗಳಿಂದ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು.
ಮಂಜುನಾಥ್ ಅವರು ತಮ್ಮ ದೊಡ್ಡಪ್ಪನ ಜಮೀನನ್ನು ಖರೀದಿಸಲು ಮುಂದಾಗಿದ್ದು, ಅದನ್ನು ವಿರೋಧಿಸಿದ ಸೋದರ ಸಂಬಂಧಿ ಶನಿವಾರ ರಾತ್ರಿ ಜಗಳ ತೆಗೆದಿದ್ದಾನೆ.
ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇರಿತಕ್ಕೆ ಒಳಗಾದ ಮಂಜುನಾಥ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.