

ಬೆಂಗಳೂರು : ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿ 45 ಕೆಜಿ ಗಾಂಜಾ ಮತ್ತು 70 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಕಾಡುಗುಡಿಯ ಪೃಥ್ವಿ ಲೇಔಟ್ ನಿವಾಸಿ ಜಿಂಡೋ ಜೇಮ್ಸ್ (34), ಅತ್ತಿಬೆಲೆಯ ಆದರ್ಶ (35) ಹಾಗೂ ಇನ್ಮೇಶ್ (29) ಬಂಧಿತರು. ಇವರೆಲ್ಲರೂ ಕೇರಳ ಮೂಲದವರು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಎಡಿಎಂಎ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೋರ್ ಬಂಕ್ ರಸ್ತೆ ಬಳಿ ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ.
ಡ್ರಗ್ಸ್ ದಂಧೆ ಸಲುವಾಗಿ ಕಾಡುಗುಡಿ ಹಾಗೂ ಅತ್ತಿಬೆಲೆಯಲ್ಲಿ ಮೂರು ಕಡೆ ಮನೆ ಬಾಡಿಗೆ ಪಡೆದಿದ್ದರು. ಮೊದಲು ಡ್ರಗ್ಸ್ ವ್ಯಸನಿಗಳಾಗಿದ್ದ ಆರೋಪಿಗಳು, ಕ್ರಮೇಣ ದಂಧೆಕೋರರಾಗಿ ಬದಲಾಗಿದ್ದಾರೆ. ಪೆಡ್ಲರ್ ಲೂಬಿನ್ ಅಮಲ್‌ನಾಥ್ ಎಂಬಾತನಿಂದ ಗಾಂಜಾ ಖರೀದಿಸಿ ಬಳಿಕ ಹಣದಾಸೆಗೆ ಆತನ ಜತೆ ಸೇರಿ ದಂಧೆ ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಅಮಲ್‌ನಾಥ್‌ನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಅಮಲ್‌ನಾಥ್ ಮೂಲಕ ವಿಶಾಖಪಟ್ಟಣದ ಪೆಡ್ಲರ್‌ಗಳು ಜೇಮ್ಸ್ ತಂಡಕ್ಕೆ ಪರಿಚಯವಾಗಿತ್ತು. ಆ ನಂತರ ಆಂಧ್ರ ಗಡಿ ಭಾಗದಿಂದ ಗಾಂಜಾ ಖರೀದಿಸಿ ಸರಕು ವಾಹನಗಳಲ್ಲಿ ಅಥವಾ ತಮ್ಮ ಕಾರಿನಲ್ಲಿ ಅತ್ತಿಬೆಲೆ ನಿವಾಸಕ್ಕೆ ತರುತ್ತಿದ್ದರು. ಬೆಂಗಳೂರು ಅಲ್ಲದೆ, ರಾಜ್ಯದ ವಿವಿಧೆಡೆಗೆ ಸಾಗಾಟ ಮಾಡುತ್ತಿದ್ದರು. ಡ್ರಗ್ಸ್ ದಂಧೆಗಾಗಿಯೇ ಆರೋಪಿಗಳು ಕೇರಳದಿಂದ ನಗರಕ್ಕೆ ಬರುತ್ತಿದ್ದರು.
ಕೆಲ ದಿನಗಳ ಹಿಂದೆ ವ್ಯಸನಿಯೊಬ್ಬನನ್ನು ಬಂಧಿಸಿ, ಆತನ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಜೆ.ಸಿ. ನಗರ ಉಪ ವಿಭಾಗದ ಎಸಿಪಿ ರೀನಾ ಎನ್.ಸುವರ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಎಡಿಎಂಎ ಮಾದಕ ವಸ್ತುವನ್ನು ಕೊತ್ತನೂರು ಬಳಿ ನೈಜೀರಿಯಾ ಪ್ರಜೆಯಿಂದ ಖರೀದಿಸಿದ್ದಾಗಿ ಪೆಡ್ಲರ್‌ಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.