ಚ.ಪಟ್ಟಣದಲ್ಲಿ ಪಶು ವೈದ್ಯರ ಕೊರತೆ ನೀಗಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹ

07 CRP 05
ಚನ್ನರಾಯಪಟ್ಟಣ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಲು-ಬಾಯಿ ರೋಗದ 3ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ರಾಧಾ ಮಂಜುನಾಥ್, ಶಿವಣ್ಣ, ಮಂಜಣ್ಣ, ಡಾ.ಸುಂದರೇಶ್, ಡಾ.ಸೋಮಶೇಖರ್ ಇದ್ದರು.
Published on


ಚನ್ನರಾಯಪಟ್ಟಣ: ತಾಲೂಕಿನಲ್ಲಿ ಸುಮಾರು 20 ಪಶು ವೈದ್ಯರ ಕೊರತೆ ಇದ್ದು, ಸರ್ಕಾರವು ಕೂಡಲೇ ನೇಮಕಾತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರದ 3ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರವು ಜನರನ್ನು ಮೆಚ್ಚಿಸುವ ಸಲುವಾಗಿ ಗೋಶಾಲೆ ತೆರೆಯುವ ವಿಚಾರದಲ್ಲಿ ನಾಮ್‌ಕೇವಾಸ್ತೆ ಗೆ ಚರ್ಚೆ ಮಾಡಿದರೆ ಉಪಯೋಗವಿಲ್ಲ. ಶೀಘ್ರ ಯೋಜನೆ ರೂಪಿಸಿ ಗೋಶಾಲೆ ತೆರೆದು ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿ ಪೋಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಗೋವುಗಳ ಗೋಳು ಶಾಪವಾಗಿ ಎಲ್ಲರಿಗೂ ತಟ್ಟಲಿದೆ ಎಂದರು.
ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವುದು ಅಗತ್ಯವಾಗಿದ್ದು, ಆರೋಗ್ಯದಲ್ಲಿ ಏರು-ಪೇರು ಇಲ್ಲವೇ ಇತರೆ ಸಮಸ್ಯೆಗಳಿಗೆ ತುತ್ತಾಗಿ ಮೃತಪಟ್ಟಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಲಭ್ಯವಾಗಲಿದೆ ಎಂದು ತಿಳಿಸಿದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 384 ಗ್ರಾಮಗಳಿದ್ದು, 1.25 ಲಕ್ಷ ಜಾನುವಾರುಗಳಿವೆ. 8 ತಂಡಗಳು ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಲಿದ್ದು, ಡಿ.8 ರವರೆಗೆ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ ಎಂದರು.

ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಿವಣ್ಣ, ಮಂಜಣ್ಣ, ಚಂದ್ರಶೇಖರ್, ಮಾಜಿ ನಿರ್ದೇಶಕ ಅನಿಲ್, ಪಶು ಮುಖ್ಯ ವೈದ್ಯಾಧಿಕಾರಿ ಡಾ.ಸುಂದರೇಶ್, ಪಶು ವೈದ್ಯರಾದ ಡಾ.ಸೋಮಶೇಖರ್, ಡಾ.ಸುಬ್ರಮಣ್ಯ, ಡಾ.ರಘುನಾಥ್, ಡಾ.ಮಂಜುನಾಥ್, ಡಾ.ಶ್ರೀಧರ್ ಇತರರು ಇದ್ದರು.

ಫೋಟೋ ಶೀರ್ಷಿಕೆ:
07 ಸಿಆರ್‌ಪಿ 05: ಚನ್ನರಾಯಪಟ್ಟಣ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಲು-ಬಾಯಿ ರೋಗದ 3ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ರಾಧಾ ಮಂಜುನಾಥ್, ಶಿವಣ್ಣ, ಮಂಜಣ್ಣ, ಡಾ.ಸುಂದರೇಶ್, ಡಾ.ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net