ಗ್ರಾಹಕ ಪರಿಷತ್‌ನಿಂದ ಸಹಿ ಸಂಗ್ರಹ

2fad8e54-653e-4b11-9dea-25e92df17810
Published on

ಹೈದರಾಲಿ ರಸ್ತೆಯ 45 ಮರಗಳನ್ನು ಕಡಿದಿರುವುದರ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರನ್ನು ಒಗ್ಗೂಡಿಸುವ ದೃಷ್ಟಿಯಿಂದ ಏ.15ರಿಂದ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಹೋರಾಟ ಬೆಂಬಲಿಸಿ ಈವರೆಗೆ 7,636 ಜನ ಸಹಿ ಹಾಕಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಾಲಯದ ಅಧ್ಯಕ್ಷರಿಂದ ತನಿಖೆ ನಡೆಸುವುದು, ಮರಗಳ ಮಾರಣಹೋಮಕ್ಕೆ ಕಾರಣವಾದ ಕಾಮಗಾರಿಯನ್ನು ಸ್ಥಗಿತಗೊಳಿಸುವುದು, ಅಲ್ಲದೆ ಆ ಜಾಗದಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಮುಂದೆ ಈ ರೀತಿ ಕೃತ್ಯ ನಡೆಯದಂತೆ ತಡೆಯಲು ಕೈಜೋಡಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಆರಂಭವಾಗಿದೆ.

ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಹೆಚ್ಚು ಎಂದು ಭಾವಿಸಿರುವ ಸುಪ್ರೀಂ ಕೋರ್ಟ್ ಇತ್ತೀಚೆಗೆ ಪರಿಸರಕ್ಕೆ ಹಾನಿ ಮಾಡುವ ಜನರಿಗೆ ಯಾವುದೇ ಕರುಣೆ ತೋರಿಸದೆ ಅಕ್ರಮವಾಗಿ ಕಡಿಯುವ ಪ್ರತಿ ಮರಕ್ಕೂ 1 ಲಕ್ಷ ರೂ. ದಂಡ ವಿಧಿಸಲು ಅನುಮೋದಿಸಿದೆ. ಹೀಗಾಗಿ, ರಸ್ತೆ ವಿಸ್ತರಣೆ ಹೆಸರಿನಲ್ಲಿ 50 ವರ್ಷಕ್ಕಿಂತ ಹಳೆಯದಾದ 45 ಬೃಹತ್ ಮರಗಳನ್ನು ನಿರ್ದಯವಾಗಿ ಕಡಿದಿರುವುದನ್ನು ವಿರೋಧಿಸಬೇಕಿದೆ. ಈ ರೀತಿಯ ನಿರಂತರ ನಗರೀಕರಣವು ನಮ್ಮ ನೈಸರ್ಗಿಕ ಪರಿಸರಕ್ಕೆ ಮಾತ್ರವಲ್ಲದೆ ಮೈಸೂರಿನ ಹಸಿರುವ ಪರಂಪರೆಗೂ ಧಕ್ಕೆಯುಂಟು ಮಾಡುವ ಆತಂಕಕಾರಿ ಬೆಳವಣಿಗೆಯಾಗಿದೆ.

ಆದ್ದರಿಂದ ಪ್ರಕೃತಿಯ ವಿರುದ್ಧವಾಗಿ ನಡೆಯುತ್ತಿರುವ ಅನಗತ್ಯ ರಸ್ತೆ ವಿಸ್ತರಣೆಯನ್ನು ತಡೆಯಲು ಹಾಗೂ ಮರ ಕಡಿದ ಜಾಗದಲ್ಲಿ ಎಂಸಿಸಿ ಮತ್ತು ಅರಣ್ಯ ಇಲಾಖೆಯು 50 ಮರಗಳನ್ನು ನೆಟ್ಟು ಕಾಪಾಡುವಂತೆ ಒತ್ತಾಯಿಸಲು ಎಲ್ಲರೂ ಒಗ್ಗೂಡಬೇಕಿದೆ ಎಂದು ಮನವಿ ಮಾಡಿದೆ. ಈ ಕೃತ್ಯವನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಇದರ ಹಿಂದಿನ ಪ್ರೇರಕ ಶಕ್ತಿಗಳನ್ನು ಬಹಿರಂಗಪಡಿಸಲು ರಾಷ್ಟ್ರೀಯ ಹಸಿರು ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಬೇಕಿದೆ. ಅಲ್ಲದೇ ಇಂತಹ ಕೃತ್ಯಗಳು ಮರುಕಳಿಸದಂತೆ ತಡೆಯಲು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅತ್ಯಗತ್ಯ. ಅದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ ಎಂದು ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net