ಗ್ರಾಮೀಣ ಪ್ರದೇಶದಲ್ಲಿದ್ದಾರೆ ಪ್ರತಿಭಾವಂತ ವಿದ್ಯಾರ್ಥಿಗಳು

24. Pyp.001
Published on

ಪಿರಿಯಾಪಟ್ಟಣ: ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಪರಿಶ್ರಮಪಟ್ಟರೆ ಯಶಸ್ಸು ಸಾಧ್ಯ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಭಾರತೀಯ ವಾಯುಸೇನೆಯಲ್ಲಿ ಮಹಿಳಾ ಪೈಲಟ್ ಫ್ಲೈಯಿಂಗ್ ಆಫೀಸರ್ ಹುದ್ದೆ ಅಲಂಕರಿಸಿರುವ ತಾಲೂಕಿನ ಯುವತಿ ತನುಶ್ರೀಗೌಡ ಅವರನ್ನು ಪಟ್ಟಣದ ಶ್ರೀ ದೇವರಾಜ ಅರಸು ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.
ಜೀವನದಲ್ಲಿ ಪ್ರಯತ್ನವಿಲ್ಲದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮಕ್ಕಳ ಪರಿಶ್ರಮಕ್ಕೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಪೈಪೋಟಿ ನೀಡಬಲ್ಲಂತಹ ವಿದ್ಯಾರ್ಥಿಗಳಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಮಕ್ಕಳ ಕೊರತೆ ಇಲ್ಲ ಎಂಬುದು ವಿದ್ಯಾರ್ಥಿಗಳ ಅಂಕ ಗಳಿಕೆಯಿಂದಲೇ ತಿಳಿದು ಬರುತ್ತಿದೆ. ಆದರೆ ಅವರಿಗೆ ಉತ್ತಮ ಕಾಲೇಜುಗಳಲ್ಲಿ ಸೀಟ್ ದೊರಕದಿರುವುದು ಬೇಸರದ ವಿಷಯವಾಗಿದೆ ಎಂದರು.

ಮೈಸೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದಾರೆ. ಈ ಪದ್ಧತಿ ಸರಿಯಲ್ಲ. ಶೇ.70 - 80 ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸಹ ಕಾಲೇಜಿಗೆ ದಾಖಲಿಸಿಕೊಂಡು ಅವರನ್ನು ಸಹ ಉತ್ತಮ ಅಂಕ ಗಳಿಸುವಂತೆ ಮಾಡಬೇಕೆಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ತನುಶ್ರೀಗೌಡ, ಹೈಸ್ಕೂಲ್ ಹಂತದಿಂದಲೇ ನನಗೆ ಭಾರತೀಯ ವಾಯುಸೇನೆಯಲ್ಲಿ ಪೈಲೆಟ್ ಆಗಬೇಕು ಎಂಬ ಮಹದಾಸೆ ಇತ್ತು. ನಿವೃತ್ತ ಸೈನಿಕರಾಗಿದ್ದ ನನ್ನ ತಂದೆ ಮತ್ತು ಕೃಷಿಕ ಹಿನ್ನೆಲೆ ಹೊಂದಿರುವ ನನ್ನ ತಾಯಿಯ ಸಂಪೂರ್ಣ ಸಹಕಾರದಿಂದ ನಾನು ಈ ಸಾಧನೆಗೈದಿದ್ದೇನೆ. ನಿರ್ದಿಷ್ಟವಾದ ಗುರಿ ಸಾಧಿಸಬೇಕಿದ್ದಲ್ಲಿ ಉತ್ತಮ ಯೋಜನೆ ಮೂಲಕ ಶ್ರದ್ಧೆ ಹಾಗೂ ಪರಿಶ್ರಮದ ಅಗತ್ಯವಿದೆ ಎಂದರು.

ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಹಾಗೂ ವಿಂಗ್ ಕಮಾಂಡರ್ ಪ್ರಕಾಶ್, ತಾಲೂಕು ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಹಾಗೂ ನಿ. ಗ್ರೂಪ್ ಕ್ಯಾಪ್ಟನ್ ಪಿ.ಎಸ್.ವಾಸುಕಿ, ತನುಶ್ರೀ ಗೌಡ ಅವರ ತಂದೆ ನಿವೃತ್ತ ಸೈನಿಕ ಜಿ.ಸಿ.ವಿಕ್ರಂ ರಾಜ್ ಮಾತನಾಡಿದರು. ತಹಸೀಲ್ದಾರ್ ಕುಂಇ ಅಹಮದ್, ಶಿರಸ್ತೇದಾರ್ ನಂದಕುಮಾರ್, ಭೂ ಸೇನಾ ನಿಗಮದ ಇಂಜಿನಿಯರ್ ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net