

ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶದಲ್ಲಿರುವ ಬಡ ಕುಟುಂಬಳಿಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸೂಚಿಸಿದರು.
ಬಾಗೂರು ಹಾಗೂ ಎಂ.ಶಿವರ ಗ್ರಾಮ ಪಂಚಾಯಿತಿ ಕಚೇರಿಯಲಲ್ಲಿ ಕರೊನಾ ವೈರಸ್ ತಡೆಗೆ
ಟಾಸ್ಕ್ ಫೋರ್ಸ್ ಕೈಗೊಂಡಿರುವ ಕ್ರಮಗಳ ಕುರಿತು ಶುಕ್ರವಾರ ಪರಿಶೀಲನೆ ನಡೆಸಿ ಮಾತನಾಡಿ,
ಇಂತಹ ಸಮಯದಲ್ಲಿ ಬಡವರ ನೆರವಿಗೆ ನಿಲ್ಲಬೇಕು ಎಂದರು.
ದೇಶಾದ್ಯಂತ ಲಾಕ್‌ಡೌನ್ ಹೇರಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಬಡವರನ್ನು ಗುರುತಿಸಿ ಉದ್ಯೋಗಖಾತ್ರಿ ಯೋಜನೆ ಮೂಲಕ ಕೆಲಸ ನೀಡಿದರೆ ಅವರಿಗೆ ಈ
ಸಮಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಅತಿಕ್ರಮವಾಗಿ ಪ್ರವೇಶಿಸುವವರ ಬಗ್ಗೆ ಸ್ವಯಂ ಪ್ರೇರಿತವಾಗಿ ಮಾಹಿತಿ ನೀಡಿದರೆ ಕರೊನಾ ಹರಡದಂತೆ ತಡೆಗಟ್ಟಬಹುದು. ತಾಲೂಕಿನ
ಜನರ ಆರೋಗ್ಯ ದೃಷ್ಟಿಯಿಂದ ಸುಮಾರು 1 ಲಕ್ಷ ಮಾಸ್ಕ್ ಗಳನ್ನು ಉಚಿತವಾಗಿ
ವಿತರಿಸಲಾಗುತ್ತಿದ್ದು ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ
ಮಾಸ್ಕ್ ಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಎಂ.ಶಿವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಎಂ.ಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಮಾಜಿ ಅಧ್ಯಕ್ಷ ಪುನೀತ್, ಸದಸ್ಯ ವಿಜಿ, ಉಪ ತಹಸೀಲ್ದಾರ್ ಕುಮಾರಸ್ವಾಮಿ, ಕಂದಾಯ ಅಧಿಕಾರಿ ಅಶೋಕ್, ಪಿಡಿಒ ಕೃಷ್ಣಾನಾಯಕ್ ಹಾಗೂ ಇತರರು ಇದ್ದರು